ಬೀಜಿಂಗ್: ಯಾವ ವಸ್ತುವಿಗೆ ಯಾವಾಗ ಯಾಕೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆಂದು ಯಾವ ಮಾರುಕಟ್ಟೆ ತಜ್ಞನಿಂದಲೂ ಊಹಿಸಲು ಅಸಾಧ್ಯ. ಜಗತ್ತಿನ ನಂಬರ್ ಒನ್ ಮಾರುಕಟ್ಟೆಯಾಗಿರುವ ಚೀನಾ ದಲ್ಲೂ ಕೂಡ ಹೀಗೊಂದು ಅಚ್ಚರಿ ಕಂಡು ಬಂದಿದೆ.
ಧೂಮ ಅನಿಲ(ಸ್ಮಾಗ್) ಹರಡಿ ಬೀಜಿಂಗ್ ನಗರದಲ್ಲಿ ಮಾಲಿನ್ಯ ಹೆಚ್ಚಾಗಿ ಆತಂಕ ಏರ್ಪಟ್ಟಿರುವುದು ಗೊತ್ತಿರುವ ವಿಚಾರವೇ. ಇದಕ್ಕಾಗಿ ಹಲವು ಎಚ್ಚರಿಕೆಯ ಕ್ರಮಗಳನ್ನೂ ದೇಶ ಕೈಗೊಂಡಿದೆ. ಈಗಾಗಲೇ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದೆ.
ಆದರೆ ಈ ಸ್ಮಾಗ್ ಹೆಚ್ಚಾದ ದಿನದಿಂದ ಆನ್ ಲೈನ್ ಮಾರುಕಟ್ಟೆಯಲ್ಲಿ ಕಾಂಡೋಮ್ ಮತ್ತು ಕ್ರೀಡಾ ವಸ್ತ್ರಗಳ ಮಾರಾಟ ದಿಢೀರ್ ಹೆಚ್ಚಳ ಕಂಡಿದೆ. ದೇಶ ಮಾಸ್ಕ್ ಮತ್ತು ಪ್ಯೂರಿಫೈರ್ ಗಳ ಮಾರಾಟದಲ್ಲಿ ಏರಿಕೆ ನಿರೀಕ್ಷೆಯಲ್ಲಿದ್ದರೆ, ಈ ಥರದ್ದೊಂದು ವೈಚಿತ್ರ ಉಂಟಾಗಿದೆ.
2 ಕೋಟಿಗೂ ಮೀರಿದ ಜನಸಂಖ್ಯೆ ಇರುವ ನಗರದಲ್ಲಿ ಮಾಲಿನ್ಯ ತಡೆ ವಸ್ತುಗಳ ವಹಿವಾಟಿನಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದ ಆನ್ ಲೈನ್ ವ್ಯಾಪಾರಿಗಳು ಕಾಂಡೋಮ್ ವ್ಯಾಪಾರ ಹೆಚ್ಚಳ ಆದುದಕ್ಕೆ ಕಾರಣ ಹುಡುಕಿ ಸೋತಿದ್ದಾರೆ.
ಚೀನಾದ ಅತಿ ದೊಡ್ಡ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಟಾವ್ ಬಾವ್ ಡಾಟ್ ಕಾಮ್ ನ ಅಂಕಿಅಂಶಗಳ ಪ್ರಕಾರ ಕೂಡ ಸ್ಮಾಗ್ ಶುರುವಾದ ನಂತರವೇ ಕಾಂಡೋಮ್ ಮಾರಾಟ ಏರಿಕೆಯಾಗಿರುವುದು ನಿಚ್ಚಳವಾಗಿದೆ. ಇದೇ ವೇಳೆ ಕ್ರೀಡಾ ಉಡುಪುಗಳ ಮಾರಾಟವೂ ಸ್ಮಾಗ್ ಪ್ರದೇಶದಲ್ಲೇ ಹೆಚ್ಚಾಗಿರುವುದು ಕಂಡು ಬಂದಿದ್ದು, ಇವೆಲ್ಲವೂ ಅವರಲ್ಲಿ ಅಚ್ಚರಿ ಮೂಡಿಸಿದೆ.