ವಾಷಿಂಗ್ಟನ್: ಭಯೋತ್ಪಾದನೆ ಬಗ್ಗೆ ಹೆಚ್ಚಿನ ಗುಪ್ತಚರ ಮಾಹಿತಿಯನ್ನು ಅಮೆರಿಕಾದೊಂದಿಗೆ ಹಂಚಿಕೊಳ್ಳಲು ಭಾರತ ಸಮ್ಮತಿಸಿದ್ದು, ಎಲ್ಲಾ ರೀತಿಯ ಭಯೋತ್ಪಾದನೆ ನಿರ್ಮೂಲನೆಯಾಗಬೇಕಿದೆ ಎಂದು ಹೇಳಿದೆ.
ಉಗ್ರವಾದ ಜಾಗತಿಕ ಸಮಸ್ಯೆಯಾಗಿದ್ದು, ಉಗ್ರ ಸಂಘಟನೆಗಳಲ್ಲಿ ಭೇದ ಮಾಡದೇ , ಎಲ್ಲಾ ರೀತಿಯ ಭಯೋತ್ಪಾದನೆಯನ್ನೂ ನಿರ್ಮೂಲನೆ ಮಾಡಬೇಕಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಅವರನ್ನು ಭೇಟಿ ಮಾಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನೋಹರ್ ಪರಿಕ್ಕರ್, ಆಶ್ ಕಾರ್ಟರ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಆಶ್ ಕಾರ್ಟರ್ ಮಾತನಾಡಿ ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಭಾರತ- ಅಮೆರಿಕ ನಡುವೆ ನಿಯತವಾಗಿ ಸಮಾಲೋಚನೆ ನಡೆಯುತ್ತಿದ್ದು ಭಯೋತ್ಪಾದನಾ ನಿಗ್ರಹ ಅಮೆರಿಕ- ಭಾರತದ ದ್ವಿಪಕ್ಷೀಯ ಸಹಕಾರದ ಪ್ರಮುಖ ವಿಷಯವಾಗಿದೆ ಎಂದು ಹೇಳಿದ್ದಾರೆ.