ಮಾಸ್ಕೋ:16ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ನಿಮಿತ್ತ ರಷ್ಯಾ ದೇಶಕ್ಕೆ ತಲುಪಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಗೀತೆ ಹಾಡುವಾಗ ಅಚಾತುರ್ಯ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ನಿನ್ನೆ ಮಾಸ್ಕೋಗೆ ಹೋದ ಮೋದಿ ಅವರಿಗೆ ಗೌರವಾರ್ಥವಾಗಿ ರಷ್ಯಾ ಮಿಲಿಟರಿ ಪಡೆಗಳಿಂದ ಗಾರ್ಡ್ ಆಫ್ ಹಾನರ್ ನೀಡಲಾಗುತ್ತಿತ್ತು. ಈ ವೇಳೆ ಭಾರತದ ರಾಷ್ಟ್ರಗೀತೆ ಹಾಡುವ ವೇಳೆ ಸೇನೆಯ ಅಧಿಕಾರಿಗಳು ಮೋದಿಯವರಿಗೆ ಸನ್ಹೆಯೊಂದನ್ನು ಮಾಡಿದ್ದಾರೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಮೋದಿಯವರು ರಾಷ್ಟ್ರಗೀತೆ ಹಾಡುವ ವೇಳೆ ಮಧ್ಯದಲ್ಲೇ ನಡೆದು ಹೋಗಿದ್ದಾರೆ. ಈ ವೇಳೆ ಮೋದಿಯವರನ್ನು ನೋಡಿದ ರಷ್ಯಾ ಅಧಿಕಾರಿ ಮೋದಿಯವನ್ನು ಕೈ ಹಿಡಿದು ಪುನಃ ಕರೆತಂದಿದ್ದಾರೆ.
ಇಂದು ನಡೆಯಲಿರುವ ಭಾರತ-ರಷ್ಯಾ 16ನೇ ಶೃಂಗಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿದ್ದು, ರಕ್ಷಣೆ ಮತ್ತು ಆರ್ಥಿಕ ಸಹಕಾರ ಕುರಿತಂತೆ ಚರ್ಚೆಗಳು ನಡೆಯಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟನ್ ಅವರು ಸಿರಿಯಾ ಪರಿಸ್ಥಿತಿ, ಭಯೋತ್ಪಾದನೆ ಬೆದರಿಕೆಯ ನಿರ್ವಹಣೆ ಸೇರಿ ಹಲವು ಜಾಗತಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.