ಷಿಕಾಗೋ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಕೊಲ್ಲುವುದು ಸಾಂವಿಧಾನಿಕ ಕರ್ತವ್ಯ ಎಂದು ಹೇಳುವ ಮೂಲಕ ಜಗತ್ತನ್ನೇ ತನ್ನೆಡೆಗೆ ನೋಡುವಂತೆ ಮಾಡಿಕೊಂಡಿದ್ದಾನೆ 55 ವರ್ಷದ ಈ ವೃದ್ಧ. ಒಬಾಮರನ್ನು ಹಿತಚಿಂತಕ ಎಂದು ವ್ಯಂಗ್ಯವಾಗಿ ಸಂಬೋಧಿಸಿರುವ ಈತ ಈಗ ಅಮೆರಿಕ ಅಧ್ಯಕ್ಷರಿಗೆ ಪ್ರಾಣಬೆದರಿಕೆ ಹಾಕಿದ ಆರೋಪದಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾನೆ.
ಈತನ ಹೆಸರು ಬ್ರಿಯಾನ್ ಡಿ ಡಚರ್. ವಿಸ್ಕಾನ್ಸಿನ್ ನ ತೋಮಹ್ ಪಟ್ಟಣದ ಈತ ಬುಧವಾರದಂದು ಒಬಾಮ ಅಧಿಕೃತ ಕಾರ್ಯಕ್ರಮವೊಂದರ ಮೇರೆಗೆ ಅಲ್ಲಿಗೆ ಭೇಟಿ ನೀಡಿದಾಗ ಪ್ರಾಣಬೆದರಿಕೆ ಹಾಕಿದ್ದಾನೆಂದು ಕೋರ್ಟ್ ಮೂಲಗಳು ತಿಳಿಸಿವೆ. ಬರಾಕ್ ಒಬಾಮ ಅವರು ಮೀಟಿಂಗ್‍ನಲ್ಲಿ ನಿರತರಾಗಿದ್ದಾಗ, ಕಚೇರಿಯ ಬಳಿ ಬಂದು ಅಲ್ಲಿನ ಸೆಕ್ಯುರಿಟಿ ಗಾರ್ಡ್ ಬಳಿ ಹೋಗಿ ``ಆ ಹಿತಚಿಂತಕ ಇಲ್ಲಿದ್ದಾನೆ ಅಂತ ಗೊತ್ತು. ನನಗೊಂದು ಅವಕಾಶ ಸಿಕ್ಕರೆ ಅವನನ್ನು ಗುಂಡಿಕ್ಕಿ ಕೊಲ್ಲುವೆ'' ಎಂದು ಆತನ ಬಳಿ ಬ್ರಿಯಾನ್ ಹೇಳಿರುವುದಾಗಿ ಲಿಖಿತ ದೂರಿನಲ್ಲಿ ವರದಿಯಾಗಿದೆ. ಆತ ಮಾನಸಿಕ ಅಸ್ವಸ್ಥನಿದ್ದರೂ ಇರಬಹುದೆಂದು
ಭಾವಿಸಿ ಆತನಿಗೆ ಬಂಧನದ ಜೊತೆಗೆ ವೈದ್ಯಕೀಯಸೇವೆಯನ್ನೂ ನೀಡಲಾಗಿದೆ. ಇದಕ್ಕೆ ಮೊದಲು ತನ್ನ ಫೇಸ್‍ಬುಕ್ ಪೇಜ್‍ನಲ್ಲೂ ಬ್ರಿಯಾನ್ ಡಿ ಡಚರ್, ಅಮೆರಿಕ ಅಧ್ಯಕ್ಷ ಒಬಾಮರನ್ನು ಕೊಲ್ಲುವುದು ಸಾಂವಿಧಾನಿಕ ಕರ್ತವ್ಯ ಎಂದು ಬರೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.