ವಿದೇಶ

ಮರೆವಿನ ಕಾಯಿಲೆಗೆ ಪರಿಹಾರ ಕೊಟ್ಟ ಎನ್ನಾರೈ

Mainashree

ಲಂಡನ್: ಅಲ್ಜೈಮರ್ ಎಂದೇ ಕರೆಯಲಾಗುವ ಮರೆಗುಳಿ ಕಾಯಿಲೆಗೆ ಶಾಶ್ವತ ಪರಿಹಾರ ನೀಡುವ ಮದ್ದು ಕಂಡು ಹಿಡಿಯಲು ಸಂಶೋಧನೆಗಳು ನಡೆಯುತ್ತಲೇ ಇವೆ. ಘಟಾನುಘಟಿ ವೈದ್ಯರು, ನರತಜ್ಞರು, ವಿಜ್ಞಾನಿಗಳು ಇನ್ನಾದರೂ ಈ ಕಾಯಿಲೆಗೆ ನಿರ್ದಿಷ್ಟ ಕಾರಣ ಹಾಗೂ ಪರಿಹಾರ ಕಂಡುಹಿಡಿಯುವ ಪ್ರಯತ್ನದಲ್ಲಿಯೇ ಇದ್ದಾರೆ.

ಆದರೆ 15 ವರ್ಷ ವಯಸ್ಸಿನ ಭಾರತೀಯ ಮೂಲದ ಬ್ರಿಟಿಷ್ ಶಾಲಾಬಾಲಕನೊಬ್ಬ ಈ ಮರೆವಿನ ಕಾಯಿಲೆಗೆ ಪರಿಹಾರ ಕಂಡುಹಿಡಿದು ಜಗತ್ತನ್ನೇ ಬೆರಗುಗೊಳಿಸಿದ್ದಾನೆ. ಸರ್ರೆಯ ಕ್ರಿಟಿನ್ ನಿತ್ಯಾನಂದನ್ ಎಂಬ ಹುಡುಗ ಅಲ್ಜೈಮರ್ ಕಾಯಿಲೆಗೆ ಪರಿಹಾರ ಹುಡುಕಿದ್ದು, ಈ ಕಾಯಿಲೆ ಕಾಣಿಸಿಕೊಳ್ಳುವ 10 ವರ್ಷ ಮೊದಲೇ ಲಕ್ಷಣಗಳನ್ನು ಗುರುತಿಸಿ ತಡೆಗಟ್ಟುವ ವಿಧಾನ ಕಂಡುಹಿಡಿದಿದ್ದಾನೆ.

ಈತನ ಸಂಶೋಧನಾ ವರದಿಗಳನ್ನು ಈಗ ಗೂಗಲ್ ಸೈನ್ಸ್ ಫೇರ್ ಪ್ರೈಜ್‍ಗೆ ಕಳಿಸಲಾಗಿದ್ದು, ಅಲ್ಲಿ ಅಂತಿಮ ಸುತ್ತಿನ ಸ್ಪರ್ಧೆಗೆ ಇದು ಆಯ್ಕೆಯಾಗಿದೆ. ಇಲ್ಲಿಯ ತನಕ ಈ ಕಾಯಿಲೆಯನ್ನು ಕಂಡುಹಿಡಿಯಲು ಹಲವು ಥರದ ಅರಿವಿನ ಪರೀಕ್ಷೆ ನಡೆಸಬೇಕಾಗಿತ್ತು ಅಥವಾ ವ್ಯಕ್ತಿಯ ಸಾವಿನ ನಂತರ ಆತನ ಮೆದುಳನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು.

ಆದರೆ ನಿತ್ಯಾನಂದನ್ ಈಗ ಟ್ರೋಜನ್ ಹಾರ್ಸ್ ಎಂಬ ಪ್ರತಿಕಾಯವನ್ನು ಸಂಶೋಧಿಸಿದ್ದು ಅದು ಮೆದುಳನ್ನು ಸಲೀಸಾಗಿ ಹೊಕ್ಕು ಅಲ್ಲಿರುವ ಅಲ್ಜೀಮರ್ ಕಾಯಿಲೆ ತರುವ ನ್ಯೂರೋಟಾಕ್ಸಿಕ್ ಪ್ರೋಟೀನ್‍ಗಳೊಂದಿಗೆ ಕೂಡಿಕೊಳ್ಳಬಲ್ಲವು. ಇದರಿಂದಾಗಿ ಮೊದಲ ಹಂತದಲ್ಲಿಯೇ ಕಾಯಿಲೆ ಗುರುತಿಸಲ್ಪಟ್ಟು ಪರಿಹಾರವೂ ಸಿಗುತ್ತದೆ ಎಂದು ಆತ ವರದಿಯಲ್ಲಿ ಹೇಳಿಕೊಂಡಿದ್ದಾನೆ.

ಕೇವಲ ಬ್ರಿಟನ್‍ನಲ್ಲಿಯೇ ಎಂಟುಲಕ್ಷಕ್ಕೂ ಹೆಚ್ಚು ಮಂದಿ ಡಿಮೆನ್ಷಿಯಾದಿಂದ ನರಳುತ್ತಿದ್ದು, ಅಲ್ಜೈಮರ್ ಕಾಯಿಲೆ ಕೂಡ ಸರ್ವೇಸಾಮಾನ್ಯವಾಗಿದೆ. ಇದರಿಂದಾಗಿಯೇ ಕನಿಷ್ಟ 60ಸಾವಿರ ಮಂದಿ ಸಾಯುತ್ತಿದ್ದಾರೆಂದೂ ಅಂಕಿಅಂಶಗಳು ತಿಳಿಸುತ್ತಿವೆ. ಬಾಲ್ಯದಲ್ಲಿ ಶ್ರವಣದೋಷಕ್ಕೆ ಒಳಗಾಗಿದ್ದ ನಿತ್ಯಾ ನಂದನ್ ಮೆದುಳಿನ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದು, ಭವಿಷ್ಯದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಮುಂದುವರೆಯುವ ಆಸೆ ಹೊಂದಿದ್ದಾನೆ.

SCROLL FOR NEXT