ಅಥೆನ್ಸ್: ಮೂರು ವಾರಗಳ ಬಳಿಕ ಸೋಮವಾರ(ನಾಳೆ)ದಿಂದ ಗ್ರೀಸ್ ನಲ್ಲಿ ಬ್ಯಾಂಕುಗಳು ಮತ್ತೆ ಕಾರ್ಯಾರಂಭ ಮಾಡಲಿವೆ.
ಗ್ರೀಕ್ ರಾಷ್ಟ್ರ ತನ್ನ ಆರ್ಥಿಕ ದಿವಾಳಿತನದಿಂದ ಹೊರಬರಲು ಅಲೆಕ್ಸಿಸ್ ಸಿಪ್ರಸ್ ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಅವರ ಸಿರಿಜಾ ಪಕ್ಷದ ಭಿನ್ನಮತೀಯ ಸದಸ್ಯರು ವಿರೋಧಿಸಿ ಬಂಡಾಯವೆದ್ದಿದ್ದರು. ಅದಕ್ಕೆ ಅಲೆಕ್ಸಿಸ್ ಸಿಪ್ರಸ್ ತಮ್ಮ ಸಚಿವ ಸಂಪುಟವನ್ನು ಪುನರ್ರಚನೆ ಮಾಡಿದ್ದು, ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿಕೊಂಡ ಕೆಲ ಹೊತ್ತಿನಲ್ಲಿ ಬ್ಯಾಂಕುಗಳನ್ನು ಮತ್ತೆ ತೆರೆಯಲು ಆದೇಶ ನೀಡಿದ್ದಾರೆ.
ಸಿಪ್ರಸ್ ಅವರಿಗೆ ನಿಕಟವರ್ತಿಯಾದ ಇಂಧನ ಖಾತೆ ಸಚಿವ ಪನೋಸ್ ಸ್ಕೋರ್ಲೆಟಿಸ್, ಸಂಪುಟ ಪುನರ್ರಚನೆ ಹೊಸ ವಾಸ್ತವಕ್ಕೆ ನಡೆದ ಸರ್ಕಾರದ ಹೊಂದಾಣಿಕೆ ಎಂದು ಹೇಳಿದ್ದಾರೆ.
ಹೊಸ ಸಂಪುಟದ ಪ್ರಕಾರ, ಗ್ರೀಕ್ ನ ಜನರಿಗೆ ಒಂದು ವಾರದಲ್ಲಿ ಬ್ಯಾಂಕುಗಳಿಂದ ಹಣ ಹಿಂಪಡೆಯುವ ಮಿತಿಯನ್ನು 60 ಯುರೋದಿಂದ 420 ಯುರೋಗೆ ಹೆಚ್ಚಳ ಮಾಡಿದೆ. ಉಳಿದ ನೀತಿ ನಿಯಮಗಳು ಯಥಾಪ್ರಕಾರ ಮುಂದುವರಿಯಲಿದೆ.