ವಿದೇಶ

2022ಕ್ಕೆ ಜನಸಂಖ್ಯೆಯಲ್ಲಿ ಭಾರತ ನಂ.1

Lingaraj Badiger

ವಾಷಿಂಗ್ಟನ್: ಕೊನೆಗೂ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿರುವ ಭಾರತ, 2022ಕ್ಕೆ 1.4 ಬಿಲಿಯನ್ ಜನಸಂಖ್ಯೆಯೊಂದಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ.

ಸದ್ಯ ಭಾರತದ ಜನಸಂಖ್ಯೆ 1.31 ಬಿಲಿಯನ್ ಇದ್ದು, ಚೀನಾದಲ್ಲಿ 1.38 ಬಿಲಿಯನ್ ಇದೆ. ಭಾರತದ ಜನಸಂಖ್ಯೆ ಪ್ರಮಾಣ ಅತಿ ವೇಗವಾಗಿ ಹೆಚ್ಚುತ್ತಿದ್ದು, ಇನ್ನು ಕೇವಲ ಏಳೇ ವರ್ಷಗಳಲ್ಲಿ ಚೀನಾವನ್ನೂ ಹಿಂದಿಕ್ಕಲಿದೆ.

2022ರ ನಂತರವೂ ಭಾರತದ ಜನಸಂಖ್ಯೆ ಹೆಚ್ಚಳ ಮುಂದುವರೆಯಲಿದ್ದು, 2030ರ ವೇಳೆ 1.5 ಬಿಲಿಯನ್ ಹಾಗೂ 2050ರ ವೇಳೆಗೆ 1.7 ಬಿಲಿಯನ್ಗೆ ತಲುಪಲಿದೆ. ಆದರೆ ಚೀನಾ ಮಾತ್ರ ಜನಸಂಖ್ಯೆ ಬೆಳವಣಿಗೆಗೆ ಕಡಿವಾಣ ಹಾಕಿದ್ದು, 2030ರವರೆಗೂ ಭಾರತಕ್ಕಿಂತ ಕಡಿಮೆ ಸಂಖ್ಯೆಯನ್ನು ಹೊಂದಿರಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಅಚ್ಚರಿ ಎಂಬಂತೆ 2050ರ ವೇಳೆಗೆ ನೈಜಿರಿಯಾ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಮೂರನೇ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ವಿಶ್ವಸಂಸ್ಥೆಯ 'ವಿಶ್ವ ಜನಸಂಖ್ಯಾ ಭವಿಷ್ಯ-2015'ರ ವರದಿ ತಿಳಿಸಿದೆ.

ವಿಶ್ವದ ಜನಸಂಖ್ಯೆ ಈಗ 730 ಕೋಟಿ ಇದೆ. ಇದು 2030ಕ್ಕೆ 850 ಕೋಟಿಗೆ, 2050ಕ್ಕೆ 970 ಕೋಟಿಗೆ, 2100ರಲ್ಲಿ 1100 ಕೋಟಿಗೆ ಏರಲಿದೆ ಎಂದು ವಿಶ್ವಸಂಸ್ಥೆ ವರದಿ ಹೇಳುತ್ತದೆ.

SCROLL FOR NEXT