ವಿದೇಶ

ಭಾರತದ ವಿರುದ್ಧ ನೇಪಾಳ ಪ್ರಧಾನಿ ಆಕ್ರೋಶ

Srinivasamurthy VN

ಕಠ್ಮಂಡು: ಟಿಬೆಟ್ ಸಮಸ್ಯೆ ಮತ್ತು ನೇಪಾಳದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತಂತೆ ವಿಶ್ವಸಂಸ್ಥೆಯಲ್ಲಿ ಭಾರತ ವಿಷಯ ಪ್ರಸ್ತಾಪಿಸಿದ್ದನ್ನು ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ವಿರೋಧಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನೇಪಾಳ ಪ್ರಧಾನಿ ಒಲಿ ಅವರು, ದಶಕಗಳ ಹಿಂದಿನ ಯುದ್ಧಾಪರಾಧ ಪ್ರಕರಣದ ಕುರಿತು ಇದೇ ಮೊದಲ ಬಾರಿಗೆ ಭಾರತ ಪ್ರಸ್ತಾಪನೆ ಮಾಡುತ್ತಿದ್ದು, ಅದೂ ಕೂಡ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ವಿಚಾರವನ್ನೇಕೆ ಪ್ರಸ್ತಾಪಿಸಿದೆ? ಪ್ರಕರಣ ನಡೆದು ದಶಕಗಳ ಬಳಿಕ ಈ ವಿಚಾರ ಪ್ರಸ್ತಾಪಿಸುವ ಅವಶ್ಯಕತೆ ಏನಿತ್ತು ಎಂದು ಒಲಿ ಪ್ರಶ್ನಿಸಿದ್ದಾರೆ. ಅಲ್ಲದೆ ಭಾರತದ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ವಿಶ್ವಸಂಸ್ಥೆ ಕೂಡ ನೇಪಾಳದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದೆ. ಈ ವಿಚಾರ ಭಾರತಕ್ಕೆ ತಿಳಿಯದೇ? ಎಂದು ಹೇಳಿದ್ದಾರೆ.

"ಈ ಹಿಂದೆ ಯಾವುದೇ ದ್ವಿಪಕ್ಷೀಯ ವೇದಿಕೆಯಲ್ಲಿ ಭಾರತ ಈ ವಿಚಾರದ ಬಗ್ಗೆ ಪ್ರಸ್ತಾಪವೇ ಮಾಡಿರಲಿಲ್ಲ. ಇದೀಗ ಏಕಾಏಕಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದೆ'' ಎಂದು ಒಲಿ ಹೇಳಿದ್ದಾರೆ.

ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಮಾತನಾಡಿದ್ದ ಭಾರತದ ಸದಸ್ಯರು, ನೇಪಾಳ ವಿಚಾರ ಪ್ರಸ್ತಾಪಿಸಿದ್ದರು. ನೇಪಾಳದಲ್ಲಿ ಹಿಂಸೆಗೆ ಒಳಗಾದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೇಪಾಳ ಸರ್ಕಾರ ಸತ್ಯ ಮತ್ತು ಸಾಮರಸ್ಯ ಸಮಿತಿ ರಚನೆ ಮಾಡಬೇಕು ಮತ್ತು ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವುದಷ್ಟೇ ಅಲ್ಲದೇ, ಹಿಂಸಾತ್ಮಕ ಬಂಡಾಯ ಪ್ರಕ್ರಿಯೆಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.

ಇದು ನೇಪಾಳ ಸರ್ಕಾರವನ್ನು ಕೆಣಕಿದ್ದು, ಪ್ರಧಾನಿ ಒಲಿ ಅವರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

SCROLL FOR NEXT