ಡೇವಿಡ್ ಕೆಮರೂನ್ 
ವಿದೇಶ

ಕೆಮರೂನ್ ಗೂ ಕಲಬುರ್ಗಿ ಹತ್ಯೆ ದೂರು

ಕರ್ನಾಟಕದ ಸಂಶೋಧಕ ಎಂ ಎಂ ಕಲಬುರ್ಗಿ ಅವರ ಹತ್ಯೆ ವಿಚಾರ ಈಗ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ವರೆಗೂ ತಲುಪಿದೆ. ಅದೂ ಪತ್ರದ ಮೂಲಕ...

ಲಂಡನ್: ಕರ್ನಾಟಕದ ಸಂಶೋಧಕ ಎಂ ಎಂ ಕಲಬುರ್ಗಿ ಅವರ ಹತ್ಯೆ ವಿಚಾರ ಈಗ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ವರೆಗೂ ತಲುಪಿದೆ. ಅದೂ ಪತ್ರದ ಮೂಲಕ. 
ಸಲ್ಮಾನ್ ರಶ್ದಿ, ನೀಲ್ ಮುಖರ್ಜಿ, ಮ್ಯಾಗಿ ಗಿಬ್ಸನ್, ರಿಕಿ ಬ್ರೌನ್, ಜೆನಿಫರ್ ಕ್ಲೆಮೆಂಟ್, ವಿಷ್ಣುಪ್ರಿಯಾ ಗುಪ್ತಾ, ಗೀತಾ ಸೆಹಗಲ್ ಸೇರಿದಂತೆ ಸುಮಾರು 200ರಷ್ಟು ಲೇಖಕರು ಬ್ರಿಟನ್ ಪ್ರಧಾನಿಗೆ ಪತ್ರವೊಂದನ್ನು ಬರೆದಿದ್ದು, ದೇಶದಲ್ಲಾಗುತ್ತಿರುವ ಅಸಹಿಷ್ಣುತೆಯ ಪ್ರಕರಣಗಳ ವಿವರ ನೀಡಿದ್ದಾರೆ. ಜತೆಗೆ, ಭಾರತದ ಸಂವಿಧಾನದಲ್ಲಿ ಹಾಸುಹೊಕ್ಕಾಗಿರುವ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯದ ರಕ್ಷಣೆಯ ಅಗತ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ಎಂದೂ ಕೋರಲಾಗಿದೆ. ಹೀಗಾಗಿ ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರೊಂದಿಗೆ ಕೆಮರೂನ್ ಈ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. 
ಸಂಶೋಧಕ ಎಂ ಎಂ ಕಲಬುರ್ಗಿ ಮತ್ತು ಪಾನ್ಸರೆ ಹತ್ಯೆ, ಪಾಕಿಸ್ತಾನದ ಗುಲಾಂ ಅಲಿ ಅವರ ಕಾರ್ಯಕ್ರಮ ರದ್ದು, ಸುಧಿೀಂದ್ರ ಕುಲಕರ್ಣಿ ಮೇಲೆ ಮಸಿ ದಾಳಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕರ ಪ್ರತಿಭಟನೆ ಸೇರಿದಂತೆ ಅನೇಕ ವಿಚಾರಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಪತ್ರವನ್ನು ಪೆನ್ ಇಂಟರ್‍ನ್ಯಾಷನಲ್ ಪ್ರಕಟಿಸಿದೆ. ಪತ್ರದಲ್ಲೇನಿದೆ?

ಒಲವಿನ ಪ್ರಧಾನಮಂತ್ರಿಗಳೇ,
ವಿಷಯ: ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ.

ವಿಶ್ವಾದ್ಯಂತದ ಲೇಖಕರು ಹಾಗೂ ಲೇಖಕರ ಸಂಘಟನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಬದ್ಧರಾಗಿದ್ದರೆ, ಈ ಕೆಳಗೆ ಸಹಿ ಹಾಕಿರುವ ನಾವು ಮಾತ್ರ ಬಹಳಷ್ಟು ಆತಂಕಿತರಾಗಿದ್ದೇವೆ. ಇದಕ್ಕೆ ಕಾರಣ, ಭಾರತದಲ್ಲಿ ಮೂಲಭೂತವಾದ ಅಥವಾ ಸಾಂಪ್ರದಾಯಿಕತೆಗೆ ಸವಾಲೊಡ್ಡುವ ಅಥವಾ ಅದರ ಬಗ್ಗೆ ವಿಶ್ಲೇಷಣೆ ಮಾಡುವವರ ವಿರುದ್ಧ ನಡೆಯುತ್ತಿರುವ ಹಿಂಸೆ, ಅಸಹಿಷ್ಣುತೆಗಳು ಮತ್ತು ಹೆಚ್ಚುತ್ತಿರುವ ಭಯದ ವಾತಾವರಣ. ಪ್ರಧಾನಿ ನರೇಂದ್ರ ಮೋದಿ ಅವರ ಬ್ರಿಟನ್ ಪ್ರವಾಸ ಆರಂಭವಾಗುತ್ತಿರುವ ಸಂದರ್ಭದಲ್ಲಿ, ನೀವು(ಕೆಮರೂನ್) ಈ ಗಂಭೀಂರ ವಿಚಾರದ ಬಗ್ಗೆ ಮೋದಿ ಅವರೊಂದಿಗೆ ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ಪ್ರಸ್ತಾಪಿಸಬೇಕೆಂದು ನಾವು ಕೋರಿಕೊಳ್ಳುತ್ತೇವೆ. ದಯವಿಟ್ಟು, ಅವರ(ಮೋದಿ) ದೇಶದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಸದ್ಯದ ಸ್ಥಿತಿ ಹೇಗಿದೆ ಎಂಬುದನ್ನು ಪ್ರಶ್ನಿಸಿ, ಭಾರತದ ಸಂವಿಧಾನದಲ್ಲಿರುವ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಸಲಹೆ ನೀಡಿ. ಕಳೆದ 2 ವರ್ಷಗಳಲ್ಲಿ ಎಂ ಎಂ ಕಲಬುರ್ಗಿ, ಗೋವಿಂದ ಪಾನ್ಸರೆ ಮತ್ತು ನರೇಂದ್ರ ದಾಭೋಲ್ಕರ್ ಎಂಬ ಮೂವರು ವಿಚಾರವಾದಿಗಳನ್ನು ಅಪರಿಚಿತರು ಕೊಲೆಗೈದಿರುವ ವಿಚಾರ ನಿಮಗೆ ಗೊತ್ತಿರಬಹುದು. 1992ರಿಂದೀಚೆಗೆ ಕನಿಷ್ಠ 37 ಪತ್ರಕರ್ತರನ್ನೂ ಹತ್ಯೆಗೈಯ್ಯಲಾಗಿದೆ. ಇನ್ನೂ ಅನೇಕ ಲೇಖಕರಿಗೆ ಬೆದರಿಕೆ ಕರೆಗಳೂ ಬಂದಿವೆ. ಕಳೆದ ಒಂದು ತಿಂಗಳಲ್ಲಿ ಈ ದಾಳಿಗಳನ್ನು ಖಂಡಿಸಿ ಕನಿಷ್ಠ 40 ಮಂದಿ ಲೇಖಕರು ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದಾರೆ. ವಿಜ್ಞಾನಿಗಳು, ಕಲಾವಿದರು, ಚಿತ್ರರಂಗದ ಮಂದಿ, ಶಿಕ್ಷಣತಜ್ಞರು, ವಿದ್ವಾಂಸರು, ಇತಿಹಾಸಕಾರರು ಮತ್ತು ನಟರು ಸೇರಿದಂತೆ ಅನೇಕರಲ್ಲಿ ಕೆಲವರು, ಅಸಹಿಷ್ಣುತೆಯನ್ನು ವಿರೋಧಿಸಿದ್ದಾರೆ, ಇನ್ನು ಕೆಲವರು ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ. ಅಕ್ಟೋಬರ್‍ನಲ್ಲಿ ಪಾಕ್ ಗಾಯಕ ಗುಲಾಂ ಅಲಿ ಅವರ ಕಾರ್ಯಕ್ರಮವನ್ನು ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯು ರದ್ದು ಮಾಡಿತು. ಇದಾದ ಕೆಲ ದಿನಗಳ ಬಳಿಕ, ಪಾಕ್‍ನ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಅವರ ಪುಸ್ತಕ ಬಿಡುಗಡೆಯನ್ನು ಆಯೋಜಿಸಿದ್ದಕ್ಕೆ ಸುಧೀಂದ್ರ ಕುಲಕರ್ಣಿ ಅವರ ಮೇಲೆ ಶಿವಸೇನೆ ಕಾರ್ಯಕರ್ತರು ಮಸಿ ದಾಳಿ ನಡೆಸಿದರು. ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿರುವುದಾಗಿ ಬ್ರಿಟನ್ ಭರವಸೆ ನೀಡಿದೆ. ಹೀಗಾಗಿ ಪ್ರಧಾನಿ ಮೋದಿ ಅವರೊಂದಿಗೆ ಈ ವಿಚಾರ ಚರ್ಚಿಸಿ ಮತ್ತು ದೇಶದ ಲೇಖಕರು, ಕಲಾವಿದರು ಮತ್ತು ಭಿನ್ನ ಅಭಿಪ್ರಾಯಗಳಿಗೆ ರಕ್ಷಣೆ ಕೊಟ್ಟು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸುವಂತೆ ತಿಳಿಸಿ ಎಂದು ನಾವು ಕೋರುತ್ತಿದ್ದೇವೆ. ಈ ರಕ್ಷಣೆಗಳು ಇಲ್ಲವಾದಲ್ಲಿ, ಪ್ರಜಾಸತ್ತಾತ್ಮಕ, ಶಾಂತಿಯುತ ಸಮಾಜ ನಿರ್ಮಾಣ ಅಸಾಧ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT