ವಿದೇಶ

ಜಿ-20 ಶೃಂಗಸಭೆ: ಭಯೋತ್ಪಾದನೆ ನಿರ್ಮೂಲನೆ ಪ್ರಯತ್ನ ತೀವ್ರಗೊಳಿಸಲು ವಿಶ್ವನಾಯಕರ ನಿರ್ಧಾರ

Srinivas Rao BV

ಅಂಟಾಲ್ಯಾ: ಟರ್ಕಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಪ್ಯಾರಿಸ್ ನಲ್ಲಿ ನಡೆದ ಭಯೋತ್ಪಾದಕರ ದಾಳಿ ವಿಷಯ ಪ್ರಾಧಾನ್ಯತೆ ಪಡೆದಿದ್ದು, ವಿಶ್ವ ನಾಯಕರು ಉಗ್ರವಾದದ ವಿರುದ್ಧ ಹೋರಾಡಲು ಪಣತೊಟ್ಟಿದ್ದಾರೆ.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪ್ಯಾರಿಸ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು ದಾಳಿಯ ರುವಾರಿಗಳನ್ನು ಶಿಕ್ಷಿಸುವ ವಿಷಯದಲ್ಲಿ ಅಮೆರಿಕಾ ಫ್ರಾನ್ಸ್ ನೊಂದಿಗಿರಲಿದೆ. ಭಯೋತ್ಪಾದಕರ ದಾಳಿ ನಡೆದಿರುವುದು ಕೇವಲ ಫ್ರಾನ್ಸ್ ಮೇಲೆ ಅಲ್ಲ ಅದು ನಾಗರಿಕ ಪ್ರಪಂಚದ ಮೇಲೆ ನಡೆದ ದಾಳಿ ಎಂದು ಒಬಾಮ ಹೇಳಿದ್ದಾರೆ.
ಐಸೀಸ್ ಉಗ್ರರ ಜಾಲವನ್ನು ಸಂಪೂರ್ಣ ನಾಶ ಮಾಡಲು ನಡೆಯುತ್ತಿರುವ ಪ್ರಯತ್ನವನ್ನು ಇಮ್ಮಡಿಗೊಳಿಸುವುದಾಗಿ ಬರಾಕ್ ಒಬಾಮ ಜಿ-20 ಸಭೆಯಲ್ಲಿ ಘೋಷಿಸಿದ್ದಾರೆ. ಆರ್ಥಿಕ ಬೆಳವಣಿಗೆ ಮತ್ತು ಹವಾಮಾನ ಬದಲಾವಣೆ ವಿಷಯದ ಬಗ್ಗೆ ಚರ್ಚಿಸಾಲು ಜಿ-20 ಶೃಂಗಸಭೆಯಲ್ಲಿ ವಿಶ್ವದ ಟಾಪ್-20 ಆರ್ಥಿಕ ರಾಷ್ಟ್ರಗಳ ಮುಖ್ಯಸ್ಥರು ಸಭೆ ಸೇರಿದ್ದರು. ಸಭೆಯಲ್ಲಿ ಪ್ಯಾರಿಸ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯ ಪ್ರಾಧಾನ್ಯತೆ ಪಡೆದು ಭಾಗವಹಿಸಿದ್ದ ಎಲ್ಲಾ ರಾಷ್ಟ್ರಗಳ ನಾಯಕರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.  
ಜಿ-20 ಶೃಂಗಸಭೆ ಜೊತೆಗೆ ಬ್ರಿಕ್ಸ್ ರಾಷ್ಟ್ರಗಳ ಮುಖ್ಯಸ್ಥರೊಂದಿಗೂ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇಡಿ ವಿಶ್ವದ ಮಾನವ ಕುಲ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಭಯೋತ್ಪಾದನೆ ಮಟ್ಟ ಹಾಕಲು ಬ್ರಿಕ್ಸ್ ರಾಷ್ಟ್ರಗಳು ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದ್ದಾರೆ.  ಎರಡು ದಿನಗಳ ಜಿ-20  ಶೃಂಗಸಭೆ ನ.16 ರಂದು ಮುಕ್ತಾಯಗೊಳ್ಳಲಿದ್ದು, ಸಭೆಯಲ್ಲಿ ಪ್ರಮುಖ ನಿರ್ಣಯಗಳೊಂದಿಗೆ ಹಣಕಾಸು ಕ್ರಿಯೆ ಕಾರ್ಯಪಡೆ ಜಾರಿಗೆ ತರುವ ಮೂಲಕ ಇಸ್ಲಾಮಿಕ್ ಸ್ಟೇಟ್ ನಂತಹ ಉಗ್ರ ಸಂಘಟನೆಗಳಿಗೆ ಸರಬರಾಜಾಗುತ್ತಿರುವ ಆರ್ಥಿಕ ಮೂಲಕ್ಕೆ ಕತ್ತರಿ ಪ್ರಯೋಗ ಮಾಡುವ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ.

SCROLL FOR NEXT