ಬಾಗ್ದಾದ್ : ಅಮೆರಿಕ ರಾಜಧಾನಿ ವಾಷಿಂಗ್ಟನ್ ಮೇಲೆ ದಾಳಿ ನಡೆಸುತ್ತೇವೆ ಎಂದು ಇಸ್ಲಾಮಿಕ್ ಸ್ಟೇಟ್(ಇಸಿಸ್) ಬೆದರಿಕೆಯೊಡ್ಡಿದೆ. ಫ್ರಾನ್ಸ್ ದಾಳಿಯ ಬೆನ್ನಲ್ಲೇ ಅಮೆರಿಕ ಮೇಲೆ ದಾಳಿ ನಡೆಸುತ್ತೇವೆ ಎಂಬ ಬೆದರಿಕೆಯೊಡ್ಡಿರುವ ವೀಡಿಯೋವನ್ನು ಇಸಿಸ್ ಸೋಮವಾರ ಬಿಡುಗಡೆ ಮಾಡಿದೆ.
ಸಿರಿಯಾ ವಿಷಯಕ್ಕೆ ಮಧ್ಯಪ್ರವೇಶ ಮಾಡಿರುವುದಕ್ಕಾಗಿ ಫ್ರಾನ್ಸ್ ಗೆ ತಕ್ಕ ಉತ್ತರವನ್ನು ನೀಡಿದ್ದೇವೆ. ಅಮೆರಿಕ ಮಾತ್ರವಲ್ಲ ಸಿರಿಯಾ ಮೇಲೆ ಆಕ್ರಮಣ ಮಾಡುವ ಎಲ್ಲ ದೇಶಗಳಿಗೂ ಪ್ಯಾರಿಸ್‌ಗೆ ಆಗಿರುವ ಸ್ಥಿತಿಯೇ ಬರಲಿದೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಲಾಗಿದೆ.
ಇರಾಕ್ ನಲ್ಲಿರುವ ಇಸಿಸ್ ಸಂಘಟನೆ ಈ ವಿಡಿಯೋ ತಯಾರಿಸಿದೆ. ಕಳೆದ ಶುಕ್ರವಾರ ಪ್ಯಾರಿಸ್ ನಲ್ಲಿ ನಡೆದ ದಾಳಿ ಮತ್ತು ಫ್ರೆಂಚ್ ಪ್ರೆಸಿಡೆಂಟ್ ಫ್ರಾನ್ಕೋಯ್ಸ್ ಹೊಲ್ಲಾಂಡ್ ಅವರ ಪ್ರತಿಕ್ರಿಯೆಯ ಟಿವಿ ದೃಶ್ಯಾವಳಿಗಳನ್ನು ಸೇರಿಸಿ ಈ ವೀಡಿಯೋ ತಯಾರಿಸಲಾಗಿದೆ.
ಫ್ರಾನ್ಸ್ ಮೇಲೆ ದಾಳಿ ನಡೆದಿದ್ದರೂ ಸಿರಿಯಾ ಮತ್ತು ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ನಾವು ವಾಯುದಾಳಿ ನಡೆಸುವುದನ್ನು ಮುಂದುವರಿಸುತ್ತೇವೆ ಎಂದು ಫ್ರಾನ್ಸ್ ಸರ್ಕಾರ ಗುಡುಗಿತ್ತು. ಅದರ ಬೆನ್ನಲ್ಲೇ ಸಿರಿಯಾದಲ್ಲಿರುವ ಇಸಿಸ್ ಕೇಂದ್ರಗಳನ್ನು ಗುರಿಯಾಗಿರಿಸಿ ಅಮೆರಿಕ ಬೆಂಬಲದೊಂದಿಗೆ ಫ್ರಾನ್ಸ್ ಭಾನುವಾರ ವಾಯುದಾಳಿ ನಡೆಸಿತ್ತು. ಇಸಿಸ್‌ನ ರಾಜಧಾನಿಯೆಂದೇ ಕರೆಯಲ್ಪಡುವ ರಾಖ್ಖಾದಲ್ಲಿ ಇಸಿಸ್‌ನ 20 ಕೇಂದ್ರಗಳ ಮೇಲೆ ವಾಯುದಾಳಿ ನಡೆದಿತ್ತು.