ಲಾಸ್‌ಏಂಜಲಿಸ್: ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳುತ್ತಿರುವವರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು, ಅಸಹಿಷ್ಣುತೆಯ ಚರ್ಚೆ ಅನಗತ್ಯ ಮತ್ತು ಭಾರೀ ಹಣ ಪಡೆದುಕೊಂಡ ಬುದ್ಧಿವಂತರು ಇದನ್ನು ಹುಟ್ಟು ಹಾಕಿದ್ದಾರೆ ಎಂದು ಹೇಳಿದ್ದಾರೆ.
ಪ್ರಾದೇಶಿಕ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸೇನಾ ಮುಖ್ಯಸ್ಥ, ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಹುಟ್ಟಿಕೊಂಡ ಇದೊಂದು ರಾಜಕೀಯ ಪ್ರೇರಿತ ಬೆಳಣಿಗೆ ಎಂದಿದ್ದಾರೆ.
ಅಸಹಿಷ್ಣುತೆ ಕುರಿತ ಚರ್ಚೆ ನಿಜಕ್ಕೂ ಒಂದು ಚರ್ಚೆಯೇ ಅಲ್ಲ. ಹಣ ಪಡೆದುಕೊಂಡ ಕೆಲವು ಅತೀ ಬುದ್ಧಿವಂತ ವ್ಯಕ್ತಿಗಳು ಅನಗತ್ಯವಾಗಿ ಸೃಷ್ಟಿಸಿರುವ ಚರ್ಚೆ ಇದಾಗಿದೆ' ಎಂದು ಸಿಂಗ್ ಹೇಳಿದ್ದಾರೆ.
ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಪ್ಯಾರಿಸ್‌ನಲ್ಲಿ ನಡೆದ ಉಗ್ರ ದಾಳಿಯ ಪರಿಣಾಮವಾಗಿ ಇಲ್ಲಿಂದ ತುರ್ತಾಗಿ ದುಬೈಗೆ ನಿರ್ಗಮಿಸಿದ ಪ್ರಯಕ್ತ, ಸಹಾಯಕ ಸಚಿವರಾಗಿರುವ ಸಿಂಗ್ ಅವರು ಆಕೆಯ ಬದಲಾಗಿ ಇಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.