ವಿದೇಶ

ಸಮಾಧಾನದಿಂದಿರಿ: ಪುಟಿನ್ ಗೆ ವಿಶ್ವಸಂಸ್ಥೆ ಕಿವಿಮಾತು

Manjula VN

ವಿಶ್ವಸಂಸ್ಥೆ: ತನ್ನ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಟರ್ಕಿ ವಿರುದ್ಧ ರಷ್ಯಾ ತೀವ್ರ ಅಸಮಾಧಾನಗೊಂಡಿದ್ದು, ಉಭಯ ದೇಶಗಳ ನಡುವೆ ಶೀತಲ ಸಮರವೇರ್ಪಟ್ಟಿದೆ. ಈ ನಡುವೆ ಮಧ್ಯ  ಪ್ರವೇಶ ಮಾಡಿರುವ ವಿಶ್ವಸಂಸ್ಥೆ ಪ್ರಕರಣ ಸಂಬಂಧ ಸಮಾಧಾನದಿಂದಿರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕಿವಿಮಾತು ಹೇಳಿದೆ.

ಪ್ರಕರಣ ಸಂಬಂಧ ರಷ್ಯಾ, ಅಮೆರಿಕ ಮತ್ತು ಟರ್ಕಿ ದೇಶಗಳ ನಾಯಕ ನಡುವಿನ ವಾಕ್ಸಮರ ಮುಂದುವರೆದಿರುವಂತೆಯೇ ತುರ್ತು ಸಭೆ ಕರೆದಿರುವ ವಿಶ್ವಸಂಸ್ಥೆ ಅಧ್ಯಕ್ಷ ಬಾನ್ ಕಿ ಮೂನ್ ಅವರು  ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಶಾಂತಿ ಸ್ಥಾಪನೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಟರ್ಕಿ ವಿರುದ್ಧ ಯಾವುದೇ ರೀತಿಯ  ಸೈನಿಕ ಕ್ರಮಕ್ಕೆ ಮುಂದಾಗದಂತೆ ಮತ್ತು ಪ್ರಕರಣ ಸಂಬಂಧ ಸಮಾಧಾನದಿಂದ ಇರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬಾನ್ ಕಿ ಮೂನ್ ಕಿವಿಮಾತು ಹೇಳಿದ್ದಾರೆ.

ಈ ನಡುವೆ ಬ್ರುಸೆಲ್ಸ್ ನಲ್ಲಿ ನ್ಯಾಟೋ ಅಧ್ಯಕ್ಷ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಅವರ ನೇತೃತ್ವದಲ್ಲಿ ತುರ್ತು ಶಾಂತಿ ಸಭೆನಡೆದಿದ್ದು, ಅಂಕಾರ ಮತ್ತು ಮಾಸ್ಕೋ ನಡುವೆ ಸಂಪರ್ಕ ಸಾಧಿಸಿ  ಅಸಮಾಧಾನದಿಂದಿರುವಂತೆ ಸಲಹೆ ಮಾಡಿದ್ದಾರೆ. ಅಂತೆಯೇ ಟರ್ಕಿಗೂ ಕೂಡ ತನ್ನ ಪ್ರಾದೇಶಿಕ ಸಮಗ್ರತೆ ಕಾಯ್ದುಕೊಳ್ಳುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ ಸೇನೆ ಕಾರ್ಯ ಇದೀಗ ಅಂತಾರಾಷ್ಟ್ರೀಯವಾಗಿ ಸುದ್ದಿಯಾಗುತ್ತಿದ್ದು, ಪ್ರಕರಣವನ್ನು ರಷ್ಯಾ ತನ್ನ ಪ್ರತಿಷ್ಠೆಯಾಗಿ ಪರಿಣಮಿಸಿದೆ.  ಹೀಗಾಗಿ ಟರ್ಕಿ ವಿರುದ್ಧ ಅದು ಕ್ರಮಕ್ಕೆ ಮುಂದಾಗಿದೆ.

SCROLL FOR NEXT