ವಿದೇಶ

ಡಿಎನ್​ಎ ರಿಪೇರಿ ಮಾಡುವ ತಾಂತ್ರಿಕತೆ ಅಧ್ಯಯನಕ್ಕೆ "ನೊಬೆಲ್"

Srinivasamurthy VN

ಸ್ಟಾಕ್ ಹೋಮ್: ಡಿಎನ್​ಎ ರಿಪೇರಿ ಮಾಡುವ ತಾಂತ್ರಿಕತೆಯ ಅಧ್ಯಯನ ನಡೆಸಿದ್ದ ಮೂವರು ವಿಜ್ಞಾನಿಗಳಿಗೆ 2015ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದೆ.

ಸ್ವೀಡನ್​ ಮೂಲದ ವಿಜ್ಞಾನಿ ಥಾಮಸ್ ಲಿಂಡಹಾಲ್, ಅಮೆರಿಕ ಮೂಲದ ವಿಜ್ಞಾನಿ ಪಾಲ್ ಮೋಡ್ರಿಚ್ ಮತ್ತು ಟರ್ಕಿ ವಿಜ್ಞಾನಿ ಅಜೀಜ್ ಸಾಂಕರ್ ಅವರಿಗೆ ಡಿಎನ್​ಎ ರಿಪೇರಿ ಮಾಡುವ  ತಾಂತ್ರಿಕತೆಗಳ ಅಧ್ಯಯನಕ್ಕಾಗಿ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ನೊಬೆಲ್ ಪಾರಿತೋಷಕ ಘೊಷಿಸಲಾಗಿದೆ. ಈ ವಿಜ್ಞಾನಿಗಳ ಅಪೂರ್ವ ಸಂಶೋಧನೆಯಿಂದ ಜೀವಕೋಶ ಕಾರ್ಯನಿರ್ವಹಿಸುವ  ವಿಧಾನದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಇವರ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು ಕ್ಯಾನ್ಸರ್ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿ ಪಡಿಸಬಹುದು ಎಂದು ರಾಯಲ್ ಸ್ವೀಡಿಷ್  ಅಕಾಡೆಮಿ ಆಫ್ ಸೈನ್ಸಸ್ ತಿಳಿಸಿದೆ.

ಲಿಂಡಹಾಲ್ (77) ಬ್ರಿಟನ್​ನ ಕ್ಲಾರ್ ಹಾಲ್ ಲ್ಯಾಬ್​ನ ಕ್ಯಾನ್ಸ್​ರ್ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತರ ಕ್ಯಾರೊಲಿನಾದಲ್ಲಿರುವ ಮೋಡ್ರಿಚ್ ಹ್ಯೂಗ್ಸ್  ಮೆಡಿಕಲ್ ಇನ್​ಸ್ಟಿಟ್ಯೂಟ್​ನಲ್ಲಿ ಸಂಶೋಧಕರಾಗಿ ಮತ್ತು ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಉತ್ತರ ಕ್ಯಾರೊಲಿನಾದಲ್ಲಿರುವ ಟರ್ಕಿ ಮೂಲದ  ಸಾಂಕರ್ ಅವರು ಚಾಪೆಲ್ ಹಿಲ್ ನಲ್ಲಿರುವ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ ಪುರಸ್ಕೃತರು 960,000 ಡಾಲರ್ ಮೊತ್ತದ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.

SCROLL FOR NEXT