ವಾಷಿಂಗ್ಟನ್:ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಮಾಜಿ ಸಿಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಯೋತ್ಪಾದನೆಯನ್ನು ಒಡಲಲ್ಲಿಟ್ಟುಕೊಂಡು, ವಿಫಲ ಆರ್ಥಿಕತೆ ಹೊಂದಿರುವ ಪಾಕಿಸ್ತಾನ ವಿಶ್ವದ ಅಪಾಯಕಾರಿ ದೇಶವಾಗಿಲ್ಲದೇ ಇರಬಹುದು, ಆದರೆ ವಿಶ್ವಕ್ಕೆ ಖಂಡಿತವಾಗಿಯೂ ಅಪಾಯಕಾರಿ ದೇಶ ಎಂದು ಅಮೇರಿಕಾ ಪತ್ರಿಕೆಯಲ್ಲಿ ಲೇಖನ ಬರೆದಿರುವ ಮಾಜಿ ಸಿಐಎ ಅಧಿಕಾರಿ ಕೆವಿನ್ ಹರ್ಲ್ಬರ್ಟ್ ಅಭಿಪ್ರಾಯಪಟ್ಟಿದ್ದಾರೆ.
ಅಣ್ವಸ್ತ್ರದ ಶಸ್ತ್ರಾಗಾರದಂತೆ ತಯಾರಾಗಿರುವ ಪಾಕಿಸ್ತಾನ, ಆರ್ಥಿಕವಾಗಿ ವಿಫಲವಾಗಿದ್ದು ಮುಂದೊಂದು ದಿನ ಅಮೇರಿಕ ನೀತಿ ನಿರೂಪಕರಿಗೆ ಹೆಚ್ಚು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುವಂತೆ ಮಾಡಲಿದೆ ಎಂದು ಕೆವಿನ್ ಎಚ್ಚರಿಸಿದ್ದಾರೆ.
ಪಾಕಿಸ್ತಾನ ಜಿಹಾದಿ ಭಯೋತ್ಪಾದಕರ ಮೂಲಕ ಭಾರತದ ವಿರುದ್ಧ ನಡೆಸುತ್ತಿರುವ ದಾಳಿಯನ್ನು ಹಲವು ವರ್ಷಗಳಿಂದ ಸಮರ್ಥಿಸಿಕೊಳ್ಳುತ್ತಿದೆ. ಪಾಕಿಸ್ತಾನ ಭಯೋತ್ಪಾದನೆ ಬಗ್ಗೆ ದ್ವಂದ್ವ ನಿಲುವು ತಳೆದಿತ್ತು. ಒಳ್ಳೆಯ ಭಯೋತ್ಪಾದನೆಯನ್ನು ಭಾರತದ ವಿರುದ್ಧದ ಪರೋಕ್ಷ ಯುದ್ಧಕ್ಕೆ ಬೆಂಬಲಿಸುತ್ತಿದ್ದ ಪಾಕಿಸ್ತಾನ ಕೆಟ್ಟ ಭಯೋತ್ಪಾದನೆಯನ್ನು ಖಂಡಿಸುತ್ತಿತ್ತು. ಪಾಕಿಸ್ತಾನದ ಬಹುತೇಕ ನಾಗರಿಕರು ತಾಲಿಬಾನ್ ಸೇರಿದಂತೆ ಹಲವು ಭಯೋತ್ಪಾದನಾ ಸಂಘಟನೆಗಳನ್ನು ಅಪಾಯಕಾರಿ ಅಂಶ ಎಂದು ಪರಿಗಣಿಸುವುದಿಲ್ಲ ಬದಲಾಗಿ, ಧಾರ್ಮಿಕ ಕರ್ತವ್ಯವನ್ನು ನಿರ್ವಹಿಸುತ್ತಿರುವ ಇಸ್ಲಾಂ ನ ಸೈನಿಕರೆಂದು ಭಾವಿಸುತ್ತಾರೆ ಎಂದು ಕೆವಿನ್ ಹರ್ಲ್ಬರ್ಟ್ ಬರೆದಿದ್ದಾರೆ.
ಪಾಕಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯುದ್ಧವನ್ನು ಅಮೇರಿಕಾದ ಯುದ್ಧ ಎಂದೇ ಪರಿಗಣಿಸಲಾಗಿತ್ತು. ಆದರೆ ಇಂದು ಪಾಕಿಸ್ತಾನ ತಾನೇ ಬೆಂಬಲಿಸಿದ್ದ ಭಯೋತ್ಪಾದನೆಯಿಂದ ಸಮಸ್ಯೆ ಎದುರಿಸುತ್ತಿದೆ ಎಂದು ಹಲ್ಬರ್ಟ್ ಹೇಳಿದ್ದಾರೆ.