ಕಠ್ಮಂಡು: ನೇಪಾಳದ ನೂತನ ಅಧ್ಯಕ್ಷರ ಆಯ್ಕೆ ಅ.28 (ಬುಧವಾರ) ನಡೆಯಲಿದೆ.
ಕಳೆದ ತಿಂಗಳು ಜಾರಿಯಾಗಿರುವ ಹೊಸ ಸಂವಿಧಾನದ ಪ್ರಕಾರ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. 2008 ರಲ್ಲಿ ನೇಪಾಳ ಗಣರಾಜ್ಯವೆಂದು ಘೋಷಣೆಯಾದ ಬಳಿಕ ಅಧ್ಯಕ್ಷರ ಆಯ್ಕೆಗೆ ನಡೆಯುತ್ತಿರುವ ಎರಡನೇ ಚುನಾವಣೆ ಇದಾಗಿದೆ. 2008 ರಲ್ಲಿ ರಾಮ್ ಬರಣ್ ಯಾದವ್ ನೇಪಾಳದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ನೇಪಾಳ ಸಂಸತ್ ನಲ್ಲಿ ಅವಿರೋಧವಾಗಿ ರಾಷ್ಟ್ರಾಧ್ಯಕ್ಷರ ಆಯ್ಕೆ ನಡೆಯದೇ ಇರುವುದರಿಂದ ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ನೇಪಾಲದ ಕಮ್ಯುನಿಷ್ಟ್ ಪಕ್ಷದ ಉಪಾಧ್ಯಕ್ಷ ವಿದ್ಯಾ ಭಂಡಾರಿ ನಾಮಪತ್ರ ಸಲ್ಲಿದ್ದಾರೆ. ವಿದ್ಯಾ ಭಂಡಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನೇಪಾಳದ ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷರಾಗಲಿದ್ದಾರೆ. ನಂದಾ ಕಿಶೋರ್ ಪನ್ ಅವರನ್ನು ಉಪಾಧ್ಯಕ್ಷರ ಸ್ಥಾನಕ್ಕೆ ಕಣಕ್ಕಿಳಿಸಲಾಗಿದೆ.
ವಿರೋಧಪಕ್ಷಗಳು ನೇಪಾಳಿ ಕಾಂಗ್ರೆಸ್ ನ ಕುಲ್ ಬಹದ್ದೂರ್ ಗುರುಂಗ್ ಅವರನ್ನು ಕಣಕ್ಕಿಳಿಸಿದ್ದು ಉಪಾಧ್ಯಕ್ಷರ ಸ್ಥಾನಕ್ಕೆ ಅಮಿಯಾ ಕುಮಾರ್ ಯಾದವ್ ಹೆಸರನ್ನು ಅಂತಿಮಗೊಳಿಸಲಾಗಿದೆ.