ಇಸ್ಲಾಮಾಬಾದ್: ದ್ವಿಪಕ್ಷೀಯ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಷರತ್ತು ವಿಧಿಸುತ್ತಾರೆ, ಇದನ್ನು ಪಾಕಿಸ್ತಾನ ಒಪ್ಪುವುದಿಲ್ಲ ಎಂದು ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಕಾಶ್ಮೀರ ವಿಷಯವನ್ನು ಹೊರತುಪಡಿಸಿ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಈಗಾಗಲೇ ನವದೆಹಲಿಗೆ(ಭಾರತ ಸರ್ಕಾರಕ್ಕೆ) ತಿಳಿಸಿದ್ದೇವೆ, ಆದರೆ ನರೇಂದ್ರ ಮೋದಿ ಮಾತ್ರ ಮಾತುಕತೆಗೆ ಸಂಬಂಧಿಸಿದಂತೆ ಷರತ್ತು ವಿಧಿಸುತ್ತಾರೆ. ಭಾರತದ ಯಾವುದೇ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಸರ್ತಾಜ್ ಅಜೀಜ್ ಎಚ್ಚರಿಸಿದ್ದಾರೆ.
ಪಾಕಿಸ್ತಾನ ವಿರೋಧಿ ವೇದಿಕೆಯನ್ನು ಬಳಸಿಕೊಂಡೆ ಮೋದಿ ಭಾರತದಲ್ಲಿ ಚುನಾವಣೆ ಎದುರಿಸಿದ್ದರು, ಈಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಷರತ್ತು ವಿಧಿಸಿದರೆ ಅದನ್ನು ಒಪ್ಪುವುದಿಲ್ಲ ಎಂದು ಸರ್ತಾಜ್ ಅಜೀಜ್ ಹೇಳಿದ್ದಾರೆ. ಕಳೆದ ತಿಂಗಳು ಭಾರತ- ಪಾಕಿಸ್ತಾನ ಎನ್ಎಸ್ಎ ಮಟ್ಟದ ದ್ವಿಪಕ್ಷೀಯ ಮಾತುಕತೆ ರದ್ದುಗೊಂಡಿತ್ತು. ಸೆ.9 ರಿಂದ ಪಾಕಿಸ್ತಾನ- ಭಾರತ ರೇಂಜರ್ ಗಳ ಸಭೆ ನಡೆಯಲಿದ್ದು ಇದಕ್ಕೂ ಮುನ್ನ ಸರ್ತಾಜ್ ಅಜೀಜ್ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದು ದ್ವಿಪಕ್ಷೀಯ ಮಾತುಕತೆ ಇತಿಹಾಸದಲ್ಲಿ ಭಾರತ ಎಂದಿಗೂ ಪಾಕಿಸ್ತಾನಕ್ಕೆ ಷರತ್ತು ವಿಧಿಸಿರಲಿಲ್ಲ ಎಂದು ಅಜೀಜ್ ಹೇಳಿದ್ದಾರೆ.