ವಿದೇಶ

ವಿಶ್ವ ವಿಖ್ಯಾತ ಐಫೆಲ್ ಟವರ್ ಮೇಲೆ ಉಗ್ರ ದಾಳಿ..?

Srinivasamurthy VN

ಪ್ಯಾರಿಸ್: ವಿಶ್ವ ವಿಖ್ಯಾತ ಪ್ಯಾರಿಸ್ ಪ್ರಮುಖ ಆಕರ್ಷಣೆ ಐಫೆಲ್ ಟವರ್ ಗೆ ಶಂಕಿತ ಉಗ್ರ ನುಸುಳಿದ ಕುರಿತು ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರ ವೀಕ್ಷಣೆಗೆ  ತಾತ್ಕಾಲಿಕ ತಡೆ ನೀಡಿದ್ದಾರೆ.

ಮೂಲಗಳ ಪ್ರಕಾರ ಭಾನುವಾರ ಶಂಕಿತ ಉಗ್ರನೋರ್ವ ಒಂದು ಬ್ಯಾಗ್ ನೊಂದಿಗೆ ಐಫೆಲ್ ಗೋಪುರವನ್ನು ಹತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ವಿಚಾರ ತಿಳಿದ ಪೊಲೀಸರು ಘಟನಾ  ಪ್ರದೇಶವನ್ನು ಸುತ್ತುವರೆದಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಪ್ರಸಾರ ಮಾಡಿದೆ.

ಭಾನುವಾರ ಬೆಳಗ್ಗೆ ಗುರುತು ಪತ್ತೆಯಾಗದ ವ್ಯಕ್ತಿಯೋರ್ವ ತನ್ನ ಬೆನ್ನ ಹಿಂದೆ ದೊಡ್ಡ ಬ್ಯಾಗ್ ವೊಂದನ್ನು ಹೊತ್ತು ಟವರ್ ಏರಿದ್ದಾನೆ ಎಂದು ಪ್ಯಾರಿಸ್ ಮೂಲಗಳು ತಿಳಿಸಿವೆ. ಹೀಗಾಗಿ ಶಂಕಿತ  ವ್ಯಕ್ತಿ ಭಯೋತ್ಪಾದಕನೇ ಎಂಬ ಶಂಕೆ ಮೂಡಿದ್ದು, ಮುಂಜಾಗ್ರತಾ ಕ್ರಮವಾಗಿ ಐಫೆಲ್ ಟವರ್ ನ ಪ್ರವಾಸಿಗರ ವೀಕ್ಷಣೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಅಲ್ಲದೆ ಟವರ್ ಸುತ್ತಮುತ್ತ  ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿ ಭದ್ರತೆಗಾಗಿ ಭಯೋತ್ಪಾದನಾ ನಿಗ್ರಹ ಪಡೆಯ ಹೆಲಿಕಾಪ್ಟರ್ ವೊಂದನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಜನವರಿಯಲ್ಲಿ ಇಸಿಸ್ ಮತ್ತು ಅಲ್ ಖೈದಾ ಗೆ ಸೇರಿದ ಮೂವರು ಭಯೋತ್ಪಾದಕರು ದಾಳಿ ಮಾಡಿ ಹಲವು ನಾಗರಿಕರನ್ನು ಕೊಂದು ಹಾಕಿದ್ದರು. ಈ ಘಟನೆ ಮಾಸುವ ಮುನ್ನವೇ  ಅಂತಹುದೇ ಮತ್ತೊಂದು ಭೀತಿ ಇದೀಗ ಪ್ಯಾರಿಸ್ ನಲ್ಲಿ ಶುರುವಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

SCROLL FOR NEXT