ಮಿನಾ: ಹಜ್ ಯಾತ್ರೆ ವೇಳೆ ಕಳೆದ ಶುಕ್ರವಾರ ಸೌದಿ ಅರೇಬಿಯಾದ ಮೀನಾದಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 22ಕ್ಕೇರಿದೆ.
ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕೃತ ಮೂಲಗಳ ಪ್ರಕಾರ ಮೆಕ್ಕಾ ದುರಂತದಲ್ಲಿ ಮೃತಪಟ್ಟವರ ಪೈಕಿ ಮತ್ತೆ 8 ಮಂದಿ ಭಾರತೀಯರ ಗುರುತು ಪತ್ತೆಯಾಗಿದ್ದು, ಆ ಮೂಲಕ ಭಾರತೀಯರ ಸಾವಿನ ಸಂಖ್ಯೆ 22ಕ್ಕೇರಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಇನ್ನು ಸಾಕಷ್ಟು ಮೃತ ದೇಹಗಳ ಗುರುತು ಪತ್ತೆಯಾಗಿಲ್ಲ. ಇವುಗಳ ಪೈಕಿ ಭಾರತೀಯ ಮೃತ ದೇಹಗಳು ಇರಬಹುದು ಎಂದು ಶಂಕಿಸಲಾಗಿದೆ. ಮೃತರ ಪತ್ತೆಗಾಗಿ ವಿದೇಶಾಂಗ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಮೃತರಲ್ಲಿ ಭಾರತದ ಕೇರಳ, ಜಾರ್ಖಂಡ್, ಗುಜರಾತ್ ಮತ್ತು ಕರ್ನಾಟಕ ಯಾತ್ರಾರ್ಥಿಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದುರಂತದಲ್ಲಿ ಈ ವರೆಗೂ ಸುಮಾರು 767 ಮಂದಿ ಸಾವನ್ನಪ್ಪಿದ್ದು, 800 ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೆಕ್ಕಾದ ಪ್ರಮುಖ ಮಸೀದಿಯಿಂದ ಸುಮಾರು 7 ಕಿ.ಮೀ. ದೂರವಿರುವ ಮೀನಾದಲ್ಲಿ ಗುರುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಹಜ್ ಯಾತ್ರೆಯ ಅಂತಿಮ ಆಚರಣೆಯಾದ ಸೈತಾನನಿಗೆ ಕಲ್ಲು ಹೊಡೆಯುವ ಪ್ರಕ್ರಿಯೆ ವೇಳೆ ನೂಕುನುಗ್ಗಲು ನಡೆದಿದೆ. ಲಕ್ಷಾಂತರ ಮಂದಿ ಒಂದೇ ಸ್ಥಳದಲ್ಲಿ ಏಕಕಾಲಕ್ಕೆ ಈ ಆಚರಣೆಗೆ ತೊಡಗಿದ್ದಾಗ ಕಾಲ್ತುಳಿತ ಉಂಟಾಗಿದ್ದೇ ಅವಘಡಕ್ಕೆ ಕಾರಣ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಹಜ್‍ನ ಇತಿಹಾಸದಲ್ಲೇ ನಡೆದ ಎರಡನೇ ಅತಿ ಭೀಕರ ದುರಂತವಾಗಿದೆ. 1990ರಲ್ಲಿ ನಡೆದ ಕಾಲ್ತುಳಿತಕ್ಕೆ 1,426 ಮಂದಿ ಮೃತಪಟ್ಟಿದ್ದರು. ಇದೇ ತಿಂಗಳ ಆರಂಭದಲ್ಲಿ ಬೃಹತ್ ಕ್ರೇನ್ ವೊಂದು ಮೆಕ್ಕಾ ಮಸೀದಿ ಮೇಲೆ ಕುಸಿದು ಬಿದ್ದು 107 ಮಂದಿ ಸಾವಿಗೀಡಾಗಿದ್ದರು. ಇದರ ನೆನಪು ಮಾಸುವ ಮೊದಲೇ ಈಗ ಮತ್ತೊಂದು ಭೀಕರ ದುರಂತ ನಡೆದಿದೆ.
ಕಾಲ್ತುಳಿತ ಉಂಟಾಗಿದ್ದು ಹೇಗೆ?
ಜಮಾರತ್‍ಗೆ ತೆರಳುವ 5 ಹಾದಿಗಳಲ್ಲಿ 2 ಹಾದಿಗಳನ್ನು ಮುಚ್ಚಲಾಗಿತ್ತು. ದಿಢೀರನೆ ಇಲ್ಲಿ ಯಾತ್ರಿಗಳ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತ ಉಂಟಾಯಿತು ಎಂದು ಇರಾನ್ ಆರೋಪಿಸಿದೆ. ಆದರೆ, ಬಸ್ ವ್ಯವಸ್ಥೆಯಿದ್ದರೂ ನಡೆದೇ ಸಾಗುತ್ತೇವೆಂದು ಯಾತ್ರಿಗಳು ಪಟ್ಟು ಹಿಡಿದು ನಡೆಯಲು ಆರಂಭಿಸಿದಾಗ ನೂಕುನುಗ್ಗಲು ಸಂಭವಿಸಿತು. ಸರ್ಕಾರದ ಸೂಚನೆ ಪಾಲಿಸದೇ ತಮ್ಮಿಷ್ಟದಂತೆ ಯಾತ್ರಿಗಳು ಚಲಿಸಲು ಶುರು ಮಾಡಿದ್ದೇ ದುರಂತಕ್ಕೆ ಕಾರಣವೆಂದು ಸೌದಿ ಆರೋಗ್ಯ ಸಚಿವ ಹೇಳಿದ್ದಾರೆ.