ಲಂಡನ್: ಈವರೆಗೆ ಭಾರತ, ಪಾಕ್, ಬಾಂಗ್ಲಾ ದಂಥ ಏಷ್ಯಾ ದೇಶಗಳಿಗೆ ಸೀಮಿತ ವಾಗಿದ್ದ ಮರ್ಯಾದಾಗೇಡು ಹತ್ಯೆ ಜರ್ಮನಿಯಲ್ಲೂ ಸದ್ದು ಮಾಡಿದೆ.
ಬಾಯ್ಫ್ರೆಂಡ್ ಜತೆ ಸೆಕ್ಸ್ ನಡೆಸಲು ಅಂಗಡಿಯೊಂದರಿಂದ ಕಾಂಡೋಮ್ ಕದ್ದಿದ್ದಕ್ಕಾಗಿ ತಂದೆಯೊಬ್ಬ ಮಗಳನ್ನೇ ಹತ್ಯೆ ಮಾಡಿದ ಘಟನೆ ಜರ್ಮನಿಯಲ್ಲಿ ನಡೆದಿದೆ. ಅಬ್ದುಲ್ ಖಾನ್ ಅವರಿಗೆ ತಮ್ಮ 19 ವರ್ಷದ ಪುತ್ರಿ ಜರ್ಮನಿಯ ಬಾಯ್ಫ್ರೆಂಡ್ ಜತೆಗೆ ಓಡಾಡುವುದು ಇಷ್ಟವಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅವರು ಅನೇಕ ಬಾರಿ ಪುತ್ರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಪುತ್ರಿ ಲರೀಬ್ ಮಾತ್ರ ತಂದೆಯ ಮಾತು ಧಿಕ್ಕರಿಸಿದ್ದಳು. ಹಿಜಾಬ್ ಧರಿಸುವುದನ್ನೂ ಕೈಬಿಟ್ಟದ್ದಳು. ಜತೆಗೆ, ಅನೇಕ ಬಾರಿ ರಾತ್ರಿಯಿಡೀ ಮನೆಯಿಂದ ಹೊರಗಿರುತ್ತಿದ್ದಳು. ಅವಳ ಈ ವರ್ತನೆಗೆ ಕುಟುಂಬದಲ್ಲಿ ತೀವ್ರ ಆಕ್ಷೇಪ ಇತ್ತು.
ಒಂದು ದಿನ ಪೊಲೀಸರು ಕರೆ ಮಾಡಿ ಅಂಗಡಿಯೊಂದರಿಂದ ಕಾಂಡೋಮ್ ಕದಿಯಲು ಯತ್ನಿಸುತ್ತಿದ್ದಾಗ ಲರೀಬ್ ಸಿಕ್ಕಿಬಿದ್ದಿದ್ದಾಳೆ ಎಂದೂ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಕುಟುಂಬ ಲರೀಬ್ ಹತ್ಯೆಗೆ ಸಂಚು ರೂಪಿಸಿತ್ತು.
ಅದರಂತೆ ಒಂದು ದಿನ ಸ್ವತಃ ಖಾನ್ ಅವರೇ ಸ್ವಂತ ಪುತ್ರಿಯಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಆಕೆಯ ಶವವನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ಊರ ಹೊರಗಿನ ಅಣೆಕಟ್ಟೆಗೆ ತಳ್ಳಿದ್ದರು ಎಂದು ತಾಯಿ ಶಾಜಿಯಾ ಮಾಹಿತಿ ನೀಡಿದ್ದಾರೆ.