ವಿದೇಶ

ಸುರಕ್ಷತೆ ನೆಪ: ವಿಮಾನದಿಂದ ಮುಸ್ಲಿಂ ಕುಟುಂಬವನ್ನು ಹೊರ ಹಾಕಿದ ಪೈಲಟ್

Shilpa D

ನ್ಯೂಯಾರ್ಕ್: ವಿಮಾನ ಟೇಕಾಪ್ ಆಗುವ ಮೊದಲು ಅದರಲ್ಲಿದ್ದ ಮುಸ್ಲಿಂ ಕುಟುಂಬವನ್ನು ಪೈಲಟ್ ಕೆಳಗಿಳಿಸಿರುವ ಘಟನೆ ಶಿಕಾಗೊದಿಂದ ವಾಷಿಂಗ್ಟನ್‌ಗೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ನಡೆದಿದೆ.

ಎಮನ್ ಅಮಿ ಸಾದ್ ಶೆಬ್ಲೆ, ಅವರ ಪತಿ, ಮೂವರು ಮಕ್ಕಳನ್ನು ಪೈಲಟ್‌ ಕೆಳಗಿಳಿಸಿದ್ದಾರೆ. ಇದು ತಾರತಮ್ಯ ಎಂದು ಶೆಬ್ಲೆ ಕುಟುಂಬ ವಿರೋಧಿಸಿದೆ. ಸುರಕ್ಷತೆಯ ಕಾರಣಕ್ಕೆ ಹೀಗೆ ಮಾಡುತ್ತಿದ್ದು, ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಪೈಲಟ್ ಉತ್ತರಿಸಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ದಿ ಕೌನ್ಸಿಲ್ ಆನ್ ಅಮೆರಿಕನ್ -ಇಸ್ಲಾಮಿಕ್ ರಿಲೇಷನ್ಸ್ ಯುನೈಟೆಡ್ ಏರ್‌ಲೈನ್ಸ್‌ಗೆ ಪತ್ರ ಬರೆದಿದ್ದು, ತಾರತಮ್ಯ ಎಸಗಿರುವ ಸಿಬ್ಬಂದಿ ವಿರುದ್ಧ ಕ್ರ ಕೈಗೊಳ್ಳುವಂತೆ ಆಗ್ರಹಿಸಿದೆ.

'ಬೇರೆ ಯಾವುದೇ ಕಾರಣಗಳಿಲ್ಲದೆ ನಮ್ಮ ಬಾಹ್ಯ ನೋಟ ಆಧರಿಸಿ ವಿಮಾನದ ಸುರಕ್ಷತೆಗೆಂದು ಹೇಳಿ ನಮ್ಮನ್ನು ಹೊರ ದಬ್ಬಿದ ಯುನೈಟೆಡ್ ಏರ್‌ಲೈನ್ಸ್‌ಗೆ ನಾಚಿಕೆಯಾಗಬೇಕು. ಮಕ್ಕಳ ರಜೆ ಕಳೆಯಲೆಂದು ಹೊರಟಿದ್ದು, ಅವರಿಗೆ ಎಳೆ ವಯಸ್ಸಿನಲ್ಲೇ ಉತ್ತಮ ಅನುಭವ ನೀಡಿದ್ದೀರಿ 'ಎಂದು ಶೆಬ್ಲೆ ಟ್ವೀಟ್‌ ಮಾಡಿದ್ದಾರೆ.

ಏರ್‌ಲೈನ್ಸ್ ಈ ಪ್ರಮಾದಕ್ಕಾಗಿ ಕ್ಷಮೆ ಯಾಚಿಸಿ, ಬೇರೊಂದು ವಿಮಾನದಲ್ಲಿ ಸೂಕ್ತ ಪ್ರಯಾಣ ವ್ಯವಸ್ಥೆ ಕಲ್ಪಿಸಿತ್ತು. ಇಂಥ ತಾರತಮ್ಯವನ್ನು ಕಂಪನಿ ಸಹಿಸುವುದಿಲ್ಲ ಎಂದು ಅದು ಹೇಳಿದೆ.

SCROLL FOR NEXT