ನ್ಯೂಯಾರ್ಕ್: ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬ ವಿಚಾರದಲ್ಲಿ ಭೇದ ಮಾಡುತ್ತಿಲ್ಲ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅಂತಾರಾಷ್ಟ್ರೀಯ ಸಮುದಾಯದೆದುರು ಪಾಕಿಸ್ತಾನ ಹೇಳುತ್ತಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ವಾಲ್ ಸ್ಟ್ರೀಟ್ ಜರ್ನಲ್( ಡಬ್ಲ್ಯೂಎಸ್ ಜೆ) ಪಾಕಿಸ್ತಾನದ ಹೇಳಿಕೆಗೆ ತದ್ವಿರುದ್ಧವಾದದ್ದನ್ನೇ ಹೇಳುತ್ತಿದೆ.
ಪೇಶಾವರದಲ್ಲಿ ಭಯೋತ್ಪಾದಕರ ದಾಳಿ ನಡೆದ ಬಳಿಕ ಪಾಕಿಸ್ತಾನ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗಿತ್ತಾದರೂ, ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿರುವ ವರದಿ ಪ್ರಕಾರ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಆರಾಮಾಗಿ ಓಡಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭಯೋತ್ಪಾದನಾ ನಿಗ್ರಹ ತಜ್ಞರನ್ನು ಉಲ್ಲೇಖಿಸಿರುವ ಡಬ್ಲ್ಯೂ ಎಸ್ ಜೆ ಜರ್ನಲ್ ವರದಿ, ಪಾಕ್ ಪ್ರಧಾನಿ ಷರೀಫ್ ಅವಧಿಯಲ್ಲಿ ಮಿಲಿಟರಿ ಹಾಗೂ ಮದರಸಾಗಳು ಉಪಯುಕ್ತ ಜಿಹಾದಿಗಳಿಗೆ(ಒಳ್ಳೆಯ ಭಯೋತ್ಪಾದನೆ)ಗೆ ಆಶ್ರಯ/ ಸಹಕಾರ ನೀಡುತಿವೆ ಎಂದು ಹೇಳಿದೆ.
ಪ್ರಮುಖವಾಗಿ ಕಡಿಮೆ ಅಭಿವೃದ್ಧಿ ಹೊಂದಿರುವ ಪಂಜಾಬ್ ಪ್ರಾಂತ್ಯದಲ್ಲಿ ಜೈಶ್-ಎ-ಮೊಹಮ್ಮದ್( ಜೆಇಎಂ) ಉಗ್ರ ಸಂಘಟನೆ 10 ಎಕರೆ ಪ್ರದೇಶದಲ್ಲಿ ಹೊಸ ಮದರಸಾವನ್ನು ತೆರೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಧರ್ಮಗುರು ನಾವು ತಲೆ ಮರೆಸಿಕೊಳ್ಳುವುದಿಲ್ಲ. ನಾವು ಯಾರು? ಜಿಹಾದಿ ಗುಂಪಿನವರು ಎಂದು ಹೇಳಿದ್ದಾರೆ.
ಪಂಜಾಬ್ ಪ್ರಾಂತ್ಯದಲ ಬಹವಾಲ್ ಪುರ, ಮುಲ್ತಾನ್ ಹಾಗೂ ಡೇರಾ ಘಾಜಿ ಖಾನ್ ಜಿಲ್ಲೆಗಳು ಜಿಹಾದಿ ಚಟುವಟಿಕೆಗಳ ಪೋಷಣಾ ಕೇಂದ್ರ (ನರ್ಸರಿ)ಯಾಗಿದ್ದು ಇಸ್ಲಾಂ ನ ದಿಯೋಬಂದಿ ಕಟ್ಟರ್ ವಿಧಾನವನ್ನು ಬೋಧಿಸಲಾಗುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.
ಪಂಜಾಬ್ ಪ್ರಾಂತ್ಯ ನವಾಜ್ ಷರೀಫ್ ಅವರ ಮೂಲವಾಗಿದ್ದು ಭಯೋತ್ಪಾದನೆ ವಿಷಯದಲ್ಲಿ ಅತಿ ಕಡಿಮೆ ಪ್ರಮಾಣದ ಹೋರಾಟ ನಡೆಯುತ್ತಿರುವ ಪ್ರದೇಶವಾಗಿರುವುದು ಮತ್ತೊಂದು ಅಚ್ಚರಿಯಾಗಿದೆ. ಕರಾಚಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಯುತ್ತಿದ್ದರೂ ಪಂಜಾಬ್ ಪ್ರಾಂತ್ಯದಲ್ಲಿ ಮಾತ್ರ ಭಯೋತ್ಪಾದನೆ ಹೆಚ್ಚುತ್ತಿದೆ. ಪಂಜಾಬ್ ಪ್ರಾಂತ್ಯದಲ್ಲಿ 182.1 ಮಿಲಿಯನ್ ಜನಸಂಖ್ಯೆ ಇದ್ದು ಪಾಕಿಸ್ತಾನದ ಅತಿ ಹೆಚ್ಚು ಜನಸಂಖ್ಯೆ ಇದೇ ಪ್ರದೇಶದವರಾಗಿದ್ದಾರೆ.
ಬಹವಾಲ್ ಪುರದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದ್ದು, ಕೇವಲ ಸೈನ್ಯ ಹಾಗೂ ಪೊಲೀಸ್ ವಿರುದ್ಧ ದಾಳಿ ನಡೆಸಿದವರ ವಿರುದ್ಧ ಮಾತ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಈ ಪ್ರದೇಶದಲ್ಲಿ ಉಗ್ರವಾದಿಗಳ ಬೆಳವಣಿಗೆಗೆ ಕಾರಣವಾಗುವ ಮದರಸಾಗಳಿಗೆ ಹಣದ ನೆರವು ಸಿಗುತ್ತಿದೆ ಎಂದು ಬಹವಲ್ ಪುರ ಸಂಸದ, ಫೆಡರಲ್-ಪ್ರಾಂತೀಯ ಸಮನ್ವಯ ಸಚಿವ ರಿಯಾಜ್ ಹುಸೇನ್ ಪಿರ್ಜಾದಾ ಹೇಳಿದ್ದಾರೆ.