ವಾಷಿಂಗ್ ಟನ್: ಭಾರತದಲ್ಲಿ ಆಧಾರ್ ಕಾರ್ಡ್ ಯಶಸ್ಸಿನಿಂದ ಆಕರ್ಷಿತವಾಗಿರುವ ವಿಶ್ವ ಬ್ಯಾಂಕ್, ಅನ್ಯ ದೇಶಗಳಿಗೂ ಇದೇ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಲು ಸಲಹೆ ನೀಡಲು ತೀರ್ಮಾನಿಸಿದೆ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶ್ವ ಬ್ಯಾಂಕ್ ನಲ್ಲಿರುವವರು ಆಧಾರ್ ಕಾರ್ಡ್ ಯೋಜನೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಾದರಿಯನ್ನು ಬೇರೆ ರಾಷ್ಟ್ರಗಳು ಅಳವಡಿಸಿಕೊಳ್ಳಬೇಕೆಂಬ ಅಭಿಪ್ರಾಯ ವಿಶ್ವ ಬ್ಯಾಂಕ್ ನಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ಸಲಹೆ ನೀಡಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ವಾಷಿಂಗ್ ಟನ್ ನಲ್ಲಿ ವಿಶ್ವ ಬ್ಯಾಂಕ್ ಅಧಿಕಾರಿಗಳೊಂದಿಗೆ ಆಧಾರ್ ಕುರಿತು ಸರಣಿ ಸಭೆಗಳನ್ನು ನಡೆಸಿರುವ ಡಾ. ಅಜಯ್ ಭೂಷಣ್, ವಿದೇಶಗಳಿಂದ ಆಗಮಿಸಿದ್ದ ಅಧಿಕಾರಿಗಳಿಗೆ ಆಧಾರ್ ಕುರಿತ ಪ್ರಾತ್ಯಕ್ಷಿಕೆ ನೀಡಿದ್ದು, ಭಾರತದಲ್ಲಿ ಸಬ್ಸಿಡಿ ಯೋಜನೆಗಳಿಗೆ ಆಧಾರ್ ನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
ಆಧಾರ್ ಅಡಿಯಲ್ಲಿ ಪ್ರಸ್ತುತ ಒಂದು ಬಿಲಿಯನ್ ಜನರು ಗುರುತಿನ ಚೀಟಿ ಹೊಂದಿದ್ದು, ಪ್ರತಿ ಆಧಾರ್ ಗುರುತಿನ ಚೀಟಿ ನೀಡುವುದಕ್ಕೆ 1 ಯುಎಸ್ ಡಿ ಗಿಂತ ಕಡಿಮೆ ಖರ್ಚಾಗುತ್ತದೆ. ಎಲ್ಲಾ ಪ್ರದೇಶದಲ್ಲೂ ಇದು ಪ್ರಮಾಣೀಕೃತವಾದ್ದರಿಂದ ಆಧಾರ್ ನಿಂದ ಬಹು ರೀತಿಯ ಉಪಯೋಗಳಿದ್ದು ಅನ್ಯ ದೇಶಗಳೂ ಇದೇ ಮಾದರಿಯ ವ್ಯವಸ್ಥೆ ರೂಪಿಸುವಂತೆ ವಿಶ್ವ ಬ್ಯಾಂಕ್ ಸಲಹೆ ನೀಡಲು ತೀರ್ಮಾನಿಸಿದೆ ಎನ್ನಲಾಗಿದೆ.