ವಿದೇಶ

ನೇಪಾಳ ನೂತನ ಪ್ರಧಾನಿಯಾಗಿ ಪ್ರಚಂಡ ಆಯ್ಕೆ; ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

Lingaraj Badiger
ಕಠ್ಮಂಡು: ಸಿಪಿಎನ್ (ಮಾವೋ ಕೇಂದ್ರ) ಅಧ್ಯಕ್ಷ ಪುಷ್ಪ್ ಕಮಲ್ ದಹಲ್ ಪ್ರಚಂಡ ಅವರು ನೇಪಾಳದ 39ನೇ ಪ್ರಧಾನಿಯಾಗಿ ಬುಧವಾರ ಆಯ್ಕೆಯಾಗಿದ್ದಾರೆ ಎಂದು ಸ್ಪೀಕರ್ ಒನ್ಸರಿ ಘರ್ತಿ ಮಗರ್ ಅವರು ತಿಳಿಸಿದ್ದಾರೆ.
ಪ್ರಧಾನಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಅವರು ಒಟ್ಟು 573 ಮತಗಳ ಪೈಕಿ 363 ಮತಗಳನ್ನು ಪಡೆದರೆ, 210ಮತಗಳು ಅವರ ವಿರುದ್ಧ ಚಲಾವಣೆಯಾಗಿವೆ ಎಂದು ಘರ್ತಿ ಮಗರ್ ಅವರು ಸಂಸತ್ತಿನಲ್ಲಿ ಘೋಷಿಸಿದರು. ನೇಪಾಳದ ನೂತನ ಪ್ರಧಾನಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ನೇಪಾಳ ಸಂಸತ್ತಿನಲ್ಲಿ ಏಕೈಕ ಅತಿ ದೊಡ್ಡ ಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ ಮದೇಶಿ ಮೋರ್ಚಾ ಬೆಂಬಲದೊಂದಿಗೆ ಪ್ರಚಂಡ ಅವರು ಎರಡನೇ ಬಾರಿ ನೇಪಾಳ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅವರು 2008ರಲ್ಲಿ ಮೊದಲ ಚುನಾಯಿತ ನೇಪಾಳ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.
ಪ್ರಚಂಡ ಅವರ ನೇತೃತ್ವದಲ್ಲಿ ಸಿಪಿಎನ್ ಪಕ್ಷ ಹಾಗೂ ನೇಪಾಳಿ ಕಾಂಗ್ರೆಸ್‌ (ಎನ್‌ಸಿ) ಈ ಹಿಂದಿನ  ಪ್ರಧಾನಿ ಕೆ.ಪಿ ಒಲಿ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಿದ್ದವು. ಒಲಿ ಅವರ ಪಕ್ಷದ ಜತೆ ಅಧಿಕಾರ ಹಂಚಿಕೊಂಡಿದ್ದ ಮಾಧೇಸಿ ಪೀಪಲ್ಸ್ ರೈಟ್ಸ್ ಫೋರಂ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿಗಳು ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದವು. ಹೀಗಾಗಿ ಒಲಿ ಜುಲೈ 24ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
SCROLL FOR NEXT