ಲಾಸೆಂಜಲಿಸ್: ಮನೆಯಲ್ಲಿ ತಮ್ಮ ಎರಡು ವರ್ಷದ ಕೂಸನ್ನು ಬಿಟ್ಟು, ರಿಯಾಲಿಟಿ ಮೊಬೈಲ್ ಆಪ್ ಆಟ ಪೋಕೆಮಾನ್ ಗೋ ಆಡಲು ಪ್ರಯಾಣ ಬೆಳೆಸಿದ್ದ ಪೋಷಕರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬ್ರೆಂಟ್ ಡೇಲಿ(27) ಮತ್ತು ಬ್ರಯನ್ನೆ ಡೇಲಿ (25) ತಮ್ಮ 2 ವರ್ಷದ ಕೂಸನ್ನು ನೀರು ಕೂಡ ಇಲ್ಲದೆ ಸುಡು ಬಿಸಿಲಿನಲ್ಲಿ ಸ್ಯಾನ್ ಟ್ಯಾನ್ ವ್ಯಾಲಿಯ ತಮ್ಮ ಮನೆಯಲ್ಲಿ ಬಿಟ್ಟು, ಪೋಕೆಮಾನ್ ಗೋ ಆಟವಾಡಲು ಹೊರಗೆ ತೆರಳಿದ್ದಾರೆ. ಈಗ ಈ ಪೋಷಕರ ಮೇಲೆ ಅಜಾಗರೂಕತೆ ಆರೋಪ ಹೇರಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇವರ ಮನೆಯ ಆಸುಪಾಸಿನಲ್ಲಿ ವಾಸಿಸುವರೊಬ್ಬರು ಮಗು ಅನಾಥವಾಗಿರುವುದನ್ನು ಕಂಡು ತುರ್ತು ಸಂಖ್ಯೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದಾಗ ಮಗು ಮನೆಯ ಮುಂಭಾಗಕ್ಕೆ ಬಂದು ಜೋರಾಗಿ ಅಳುತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಬ್ರೆಂಟ್ ಅವರ ಮೊಬೈಲ್ ಸಂಖ್ಯೆ ಪಡೆದ ಪೊಲೀಸರು, ತಮ್ಮ ಮಗು ಒಂದೇ ಅನಾಥವಾಗಿ ಇರುವ ವಿಷಯ ತಿಳಿಸಿದಾಗ ಬ್ರೆಂಟ್ ಅಜಾಗ್ರತೆಯಿಂದ ಪ್ರತಿಕ್ರಿಯಿಸಿದ್ದಾರೆ. ಪೋಷಕರು ಹಿಂದಿರುಗಿದಾಗ ಹತ್ತಿರದ ಪಾರ್ಕ್ ಮತ್ತಿತರ ಪ್ರದೇಶಗಳಲ್ಲಿ ಪೋಕೆಮಾನ್ ಗೋ ಆಟವಾಡಲು ಹೋಗಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಕೆಮಾನ್ ಗೋ ಆಟವಾಡಿಕೊಂಡು ಅಪಘಾತಗಳನ್ನು ಮಾಡಿಕೊಂಡಿರುವ ಸಾಲಿಗೆ ಈಗ ಈ ಘಟನೆ ಸೇರಿಕೊಡಿದೆ. ಕಳೆದ ತಿಂಗಳು ಈ ಆಟ ಆಡಿಕೊಂಡು ಕೆಲವು ಯುವಕರು ಅಮೆರಿಕಾ-ಕೆನಡಾ ಗಡಿರೇಖೆಯನ್ನು ದಾಟಿ ಅವಾಂತರಕ್ಕೆ ಎಡೆಮಾಡಿಕೊಟ್ಟಿದ್ದರು.
ಹಿಂದಿನ ಕೆಲವು ಪೋಕೆಮಾನ್ ಗೋ ಅಪಘಾತಗಳು
ಜುಲೈ 12: ನ್ಯೂಯಾರ್ಕ್ ನಲ್ಲಿ 28 ವರ್ಷದ ಯುವಕ ಚಕ್ರದ ಹಿಂದೆ ಪೋಕೆ ಮಾನ್ ಹಿಡಿಯಲು ಹೋಗಿ ಅಪಘಾತ.
ಜುಲೈ 13: ಇಬ್ಬರು ಕೆನಡಾ ಯುವಕರು ಪೋಕೆಮಾನ್ ಆಡುತ್ತಾ ಕಾರ್ ಚಾಲನೆ ಮಾಡುತ್ತಾ ಪೋಲೀಸರ ವಾಹನಕ್ಕೆ ಗುದ್ದಿ, ಇಬ್ಬರು ಪೊಲೀಸರಿಗೆ ಗಾಯ
ಜುಲೈ 13: ಬ್ಯುಸಿ ರಸ್ತೆಯನ್ನು ದಾಟುವಾಗ ಪೋಕೆಮಾನ್ ಆಡುತ್ತಿದ್ದರಿಂದ ಪೆನ್ಸ್ಲಿವೇನಿಯಾದ ಪಿಟ್ಸ್ ಬರ್ಗ್ ನಲ್ಲಿ ಬಾಲಕಿಯೊಬ್ಬಳಿಗೆ ಗಾಯ
ಜುಲೈ 19: ಇಂಡೋನೇಷಿಯಾದಲ್ಲಿ ಪೋಕೆಮಾನ್ ಆಡುತ್ತಾ ಸೇನಾ ಶಿಬಿರದೊಳಗೆ ನುಗ್ಗಿದ ಫ್ರೆಂಚ್ ಯುವಕ. ಬಂಧನ.
ಜುಲೈ 21: ನ್ಯೂಯಾರ್ಕ್ ನಲ್ಲಿ ಪೋಕೆ ಮಾನ್ ಆಡುತ್ತಾ ಸ್ಮಶಾನವೊಂದರಲ್ಲಿ ಮರ ಹತ್ತಿದ ಮಹಿಳೆ; ಇಳಿಯಲಾಗದೆ ತುರ್ತು ನಿಗಾ ಘಟಕ 911 ಗೆ ಕರೆ.