ವಾಷಿಂಗ್ ಟನ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ- ಪಾಕಿಸ್ತಾನ ನಡುವಿನ ಸಹಕಾರ ಪರಿಣಾಮಕಾರಿಯಾಗಿರಲು ಅಮೆರಿಕ ಕರೆ ನೀಡಿದೆ.
ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಉಗ್ರ ಮುಜಾಫರ್ ಬುರ್ಹಾನ್ ವನಿ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನ ಭಯೋತ್ಪಾದನೆಯನ್ನು ವೈಭವೀಕರಿಸಿದ್ದ ಹಿನ್ನೆಲೆಯಲ್ಲಿ ಅಮೆರಿಕ ಈ ಕರೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಗ್ರವಾದವನ್ನು ವೈಭವೀಕರಿಸದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಸಲಹೆ ನೀಡಿದ ಬೆನ್ನಲ್ಲೇ ಅಮೆರಿಕ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ-ಪಾಕಿಸ್ತಾನದ ನಡುವಿನ ಸಹಕಾರ ಮತ್ತಷ್ಟು ನಿಕಟವಾಗಬೇಕಿದೆ ಎಂದು ಹೇಳಿದೆ. ಇಸ್ಲಾಮಾಬಾದ್ ನಲ್ಲಿ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಮ್ಮೇಳನದ ಬಗ್ಗೆ ಮಾತನಾಡಿರುವ ಅಮೆರಿಕದ ವಕ್ತಾರ ಮಾರ್ಕ್ ಟೋನರ್ "ಭಯೋತ್ಪಾದನೆ ವಿರುದ್ಧದ ಹೋರಾಟದ ವಿಷಯದಲ್ಲಿ ಸ್ಥಳೀಯ ಮಟ್ಟದಲ್ಲಿ ಮಾತುಕತೆ ನಡೆಸುವುದನ್ನು ನಾವು ಉತ್ತೇಜಿಸುತ್ತೇವೆ. ಅಂತೆಯೇ ಭಾರತ- ಪಾಕಿಸ್ತಾನದ ನಡುವೆ ಸಹಕಾರ ಪರಿಣಾಮಕಾರಿಯಾಗಬೇಕು ಎಂಬುದು ಅಮೆರಿಕ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ. ಇಸ್ಲಾಮಾಬಾದ್ ನಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಗೃಹ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಭಯೋತ್ಪಾದಕರನ್ನು ವೈಭವೀಕರಿಸುವುದನ್ನು ನಿಲ್ಲಿಸಬೇಕು ಎಂದಿದ್ದರು.