ಅಲೆಪ್ಪೊ ವಾಯುದಾಳಿಯ ಅವಶೇಷಗಳಿಂದ ರಕ್ಷಣೆಗೊಂಡ ಸಿರಿಯಾ ಬಾಲಕನ ಹೃದಯ ವಿದ್ರಾವಕ ಚಿತ್ರ
ಬೀರತ್: ಸಿರಿಯಾದ ಅಲೆಪ್ಪೊ ಮೇಲೆ ನಡೆದ ವಾಯುದಾಳಿಯ ಅವಶೇಷಗಳಿಂದ ರಕ್ಷಣೆಗೊಳಗಾದ ಸಣ್ಣ ಬಾಲಕನ ಚಿತ್ರಗಳನ್ನು ಸಿರಿಯಾದ ವಿರೋಧಿ ಕಾರ್ಯಕರ್ತರು ಬಿಡುಗಡೆ ಮಾಡಿದ್ದು ಮನಕಲಕುವಂತಿವೆ.
ಬೆದರಿರುವ, ಸುಸ್ತಾದ ನೋಟವನ್ನು ಬೀರಿ ಆಂಬ್ಯುಲೆನ್ಸ್ ನ ಕಿತ್ತಳೆ ಬಣ್ಣದ ಆಸನದಲ್ಲಿ ಕುಳಿತಿರುವ ಬಾಲಕನ ಮೈಯೆಲ್ಲಾ ಧೂಳು ಮತ್ತು ಮುಖವೆಲ್ಲ ರಕ್ತ ತುಂಬಿದ್ದು, ಸಿರಿಯಾದ ಉತ್ತರ ಭಾಗದ ನಗರದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮಗಳನ್ನು ಕಾಣಿಸಿದೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲೆಪ್ಪೊದ ಐದು ವರ್ಷದ ಒಮ್ರಾನ್ ಈ ಬಾಲಕ ಎಂದು ವೈದ್ಯರು ಗುರುತಿಸಿದ್ದು, ಅವನ ತಲೆಗೆ ಬಿದ್ದಿರುವ ಪೆಟ್ಟಿಗೆ ಚಿಕಿತ್ಸೆ ನೀಡಿದ್ದಾರೆ. ಬುಧವಾರ ತಡರಾತ್ರಿ ಅಲೆಪ್ಪೊ ಮಾಧ್ಯಮ ಕೇಂದ್ರ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಬಂಡುಕೋರರ ನಿಯಂತ್ರಣದಲ್ಲಿರುವ ಕ್ವಾಟರ್ಜಿ ಜಿಲ್ಲೆಯ ಮೇಲೆ ವಾಯುದಾಳಿ ನಡೆದ ಮೇಲೆ ಪುಡಿಪುಡಿಯಾದ ಕಟ್ಟಡಗಳ ಆವಶೇಷದಲ್ಲಿ ಸಿಲುಕಿದ್ದ ಬಾಲಕನನ್ನು ಎತ್ತಿಕೊಂಡು ಬರುತ್ತಿರುವ ವ್ಯಕ್ತಿಯೊಬ್ಬನ ದೃಶ್ಯಾವಳಿ ಲಭ್ಯವಾಗಿದೆ.
ಬೆದರಿದ್ದ ಬಾಲಕನನ್ನು ಆಂಬ್ಯುಲೆನ್ಸ್ ನಲ್ಲಿ ಕೂರಿಸಿ ಅವರ ಮೈಮೇಲಿದ್ದ ರಕ್ತವನ್ನು ಬಟ್ಟೆಯಿಂದ ಒರೆಸುವ ದೃಶ್ಯಾವಳಿಯು ವಿಡಿಯೋ ಫುಟೇಜ್ ನಲ್ಲಿ ಕಾಣಬಹುದಾಗಿದೆ.