ಅಮೆರಿಕದ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಹಾದಿ
ಲಾಸ್ ಏಂಜಲೀಸ್: ಇಲ್ಲಿನ ಜನನಿಬಿಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ತಡರಾತ್ರಿ ಬಂದೂಕು ಹಾರಿಸಿದ ಶಬ್ಧ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಬೇರೆಡೆಗೆ ತುರ್ತು ಸ್ಥಳಾಂತರಿಸಲಾಯಿತು. ಆದರೆ ಅದು ಜೋರಾದ ಶಬ್ದವಷ್ಟೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ತನಿಖೆ ನಡೆಸಲಾಗುತ್ತಿದೆ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಮಾಧ್ಯಮ ಸಂಪರ್ಕದ ಕಮಾಂಡಿಂಗ್ ಅಧಿಕಾರಿ ಆಂಡಿ ನೀಮನ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಕನಿಷ್ಠ ಎರಡು ವಿಮಾನ ನಿಲ್ದಾಣಗಳನ್ನು ಸ್ವಯಂ ಸ್ಥಳಾಂತರಿಸಲಾಗಿದ್ದು, ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಏನಾದರೂ ಸಂಶಯಾಸ್ಪದ ವಸ್ತು ಕಂಡುಬರುತ್ತದೆಯೇ ಎಂದು ಪರೀಕ್ಷಿಸಲಾಗುತ್ತಿದೆ ಎನ್ನುತ್ತಾರೆ ಲಾಸ್ ಏಂಜಲೀಸ್ ಪೊಲೀಸ್ ಅಧಿಕಾರಿ ಅಲಿಸಿಯಾ ಹೆರ್ನಾಂಡೀಸ್. ವಿಮಾನ ನಿಲ್ದಾಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ದೃಢಪಟ್ಟ ಮೇಲೆಯೇ ಪ್ರಯಾಣಿಕರಿಗೆ ಮತ್ತೆ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ವಿಡಿಯೋದಲ್ಲಿ ನೂರಾರು ಮಂದಿ ನಿಲ್ದಾಣದ ಹೊರಗೆ ಭೀತಿಯಿಂದ ಓಡಾಡುತ್ತಿರುವುದು ಕಂಡುಬರುತ್ತದೆ.
ಟರ್ಕಿ ಮತ್ತು ಬೆಲ್ಜಿಯಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ಮಾರಕ ದಾಳಿ ನಡೆದ ನಂತರ ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಹೇಳಲಾಗಿದೆ.