ಚಿಕಾಗೊ: ಭೂಮಿಗೆ ಸುತ್ತು ಬಂದ ಅಮೆರಿಕಾದ ಮೊದಲ ವಿಜ್ಞಾನಿ ಮತ್ತು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಹಿರಿಯ ನಾಗರಿಕ ಜಾನ್ ಗ್ಲೆನ್ನ್ ನಿನ್ನೆ ಮೃತಪಟ್ಟಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಹಿರಿಯ ಖಗೋಳ ವಿಜ್ಞಾನಿಯಾಗಿರುವ ಜಾನ್ ಅವರ ನಿಧನಕ್ಕೆ ಅಮೆರಿಕಾದ ಅಂತರಿಕ್ಷ ಸಂಸ್ಥೆ ನಾಸಾ ಗೌರವ ನಮನ ಸಲ್ಲಿಸಿದೆ. ಇವರು ಬಳಿಕ ಅಮೆರಿಕಾ ಸೆನೆಟ್ ನಲ್ಲಿಯೂ ಎರಡು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ನಾಸಾ ಸಂಸ್ಥೆ ಜಾನ್ ಅವರನ್ನು ನಾಯಕ ಎಂದು ಬಣ್ಣಿಸಿದೆ.
''ಭೂಮಿಗೆ ಸುತ್ತು ಹಾಕಿ ಬಂದ ಅಮೆರಿಕಾದ ಮೊದಲ ವಿಜ್ಞಾನಿ ಸೆನೆಟರ್ ಜಾನ್ ಗ್ಲೆನ್ನಿಯವರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಅವರು ಒಬ್ಬ ನಿಜವಾದ ಅಮೆರಿಕಾದ ನಾಯಕ ಎಂದು ನಾಸಾ ಟ್ವೀಟ್ ಮಾಡಿದೆ.
ಗ್ಲೆನ್ನೆ ನಿನ್ನೆ ಒಹಿಯೊದ ಕೊಲಂಬಸ್ ನಲ್ಲಿ ನಿಧನರಾದರು ಎಂದು ಜಾನ್ ಗ್ಲೆನ್ನೆ ಸಾರ್ವಜನಿಕ ವ್ಯವಹಾರಗಳ ಕಾಲೇಜು ತನ್ನ ವೆಬ್ ಸೈಟ್ ನಲ್ಲಿ ಘೋಷಿಸಿತು.
ಕಳೆದ ಕೆಲ ಸಮಯಗಳಿಂದ ಗ್ಲೆನ್ನ್ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. 2014 ರಲ್ಲಿ ಹೃದಯ ಕವಾಟ ಸ್ಥಳಾಂತರ ಚಿಕಿತ್ಸೆಗೊಳಪಟ್ಟಿದ್ದರು. ಹೃದಯಾಘಾತವಾಗಿ ವಾರಕ್ಕಿಂತಲೂ ಅಧಿಕ ಕಾಲ ಕ್ಯಾನ್ಸರ್ ವಾರ್ಡ್ ಗೆ ದಾಖಲಾಗಿದ್ದರು ಎಂದು ಕಾಲೇಜು ತಿಳಿಸಿದೆ.
1962ರಲ್ಲಿ ಜಾನ್ ಗ್ಲೆನ್ನ್ ಅವರು ಮೊದಲ ಬಾರಿಗೆ ಭೂ ಕಕ್ಷೆಯನ್ನು ವಿಮಾನದಲ್ಲಿ 5 ಗಂಟೆಗೂ ಕಡಿಮೆ ಅವಧಿಯಲ್ಲಿ ಸುತ್ತಿ ಬಂದಿದ್ದರು.ತಮ್ಮ 77ರ ಹರೆಯದಲ್ಲಿ ಅಂತರಿಕ್ಷಕ್ಕೆ ಹೋಗಿ ಅಲ್ಲಿಗೆ ಹೋದ ಅತ್ಯಂತ ಹಿರಿಯ ಖಗೋಳ ವಿಜ್ಞಾನಿ ಎಂಬ ಹಿರಿಮೆಗೆ ಪಾತ್ರರಾದರು.
ಅಮೆರಿಕಾದ ಮಿಲಿಟರಿ ಮತ್ತು ಅಂತರಿಕ್ಷ ಕಾರ್ಯಕ್ರಮಗಳಲ್ಲಿ 23 ವರ್ಷ ಸೇವೆ ಸಲ್ಲಿಸಿದ ನಂತರ ಗ್ಲೆನ್ನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಅಮೆರಿಕಾ ಸೆನಟ್ ನ್ನು ಪ್ರವೇಶಿಸಿದ್ದರು. 2012ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಗ್ಲೆನ್ನ ಅವರಿಗೆ ಅಮೆರಿಕಾದ ಅತ್ಯಂತ ಉನ್ನತ ನಾಗರಿಕ ಗೌರವ ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಮ್ ನ್ನು ನೀಡಿ ಗೌರವಿಸಿದ್ದರು.