ವಿದೇಶ

ಪ್ರಧಾನಿ ಮೋದಿಗೆ ಟ್ರಂಪ್ ಕೊಟ್ಟ 'ರಹಸ್ಯ ಪತ್ರ'ದಲ್ಲಿ ಏನಿದೆ?

Sumana Upadhyaya
ನವದೆಹಲಿ: ಮೊನ್ನೆ ನವೆಂಬರ್ 9ರಂದು ಡೊನಾಲ್ಡ್ ಟ್ರಂಪ್ ಅವರು ಮುಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರು ಎಂದು ಘೋಷಣೆಯಾದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಮೂಲಕ ಶುಭಾಶಯಗಳನ್ನು ಹೇಳಿದ್ದರು.
ಭಾರತ-ಅಮೆರಿಕಾ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ನಿಮ್ಮೊಂದಿಗೆ ಅತ್ಯಂತ ಹತ್ತಿರದಿಂದ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂದಿದ್ದರು. ಟ್ರಂಪ್ ಅವರು ಸೀಲು ಹಾಕಿದ ಕವರ್ ನಲ್ಲಿ ಒಂದು ಪತ್ರವನ್ನು ಇಟ್ಟು ಅದನ್ನು ವಿಶೇಷವಾಗಿ ಪ್ರಧಾನಿ ಮೋದಿಯವರಿಗೆ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಅ್ಯಷ್ಟನ್ ಕಾರ್ಟರ್ ಮೂಲಕ ಕಳುಹಿಸಿದ್ದಾರೆ.
ಭಾರತಕ್ಕೆ ಆಗಮಿಸಿರುವ ಕಾರ್ಟರ್ ನಿನ್ನೆ ಸಂಜೆ ಪ್ರಧಾನಿಯವರನ್ನು ಭೇಟಿ ಮಾಡಿದ್ದು, ಟ್ರಂಪ್ ಅವರು ಕಳುಹಿಸಿದ ರಹಸ್ಯ ಪತ್ರವನ್ನು ನೀಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಕಾರ್ಟರ್ ಅವರೊಂದಿಗಿನ ಮೋದಿಯವರ ಮಾತುಕತೆಯನ್ನು ಸರ್ಕಾರ ರಹಸ್ಯವಾಗಿಟ್ಟಿದೆ. ಹಾಗಾಗಿ ಟ್ರಂಪ್ ಅವರು ಮೋದಿಗೆ ಕೊಟ್ಟ ಪತ್ರದಲ್ಲಿ ಏನಿರಬಹುದು ಎಂಬ ಕುತೂಹಲವುಂಟಾಗಿದೆ.
ಈ ಬಗ್ಗೆ ಪ್ರಧಾನಿ ಸಚಿವಾಲಯದ ಅಧಿಕಾರಿಯೊಬ್ಬರನ್ನು ಕೇಳಿದಾಗ, ಹೌದು ಕಾರ್ಟರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದರು ಎಂದು ಹೇಳಿದರಷ್ಟೇ ಹೊರತು ಬೇರಾವ ಮಾಹಿತಿಯನ್ನೂ ಬಿಟ್ಟುಕೊಡಲಿಲ್ಲ. ಪತ್ರದ ಕುರಿತು ಏನೂ ಹೇಳಲಿಲ್ಲ.
ಕಾರ್ಟರ್ ಅವರ ಭಾರತ ಭೇಟಿಯ ಬಗ್ಗೆ ರಕ್ಷಣಾ ಸಚಿವಾಲಯ ಸಂಪೂರ್ಣ ವೇಳಾಪಟ್ಟಿಯನ್ನು ಬಹಿರಂಗಪಡಿಸಿಲ್ಲ. ರಕ್ಷಣಾ ಇಲಾಖೆಯ ಪ್ರೋಟೋಕಾಲ್ ವಿಭಾಗ ಮನೋಹರ್ ಪರಿಕ್ಕರ್ ಅವರೊಂದಿಗಿನ ಭೇಟಿಯ ಸಮಯವನ್ನು ಮಾತ್ರ ತಿಳಿಸಿದೆ. ನಿರ್ಗಮಿತ ಅಮೆರಿಕಾ ರಕ್ಷಣಾ ಸಚಿವರಾಗಿರುವ ಅಶ್ಟೊನ್ ಕಾರ್ಟರ್ ಅವರೊಂದಿಗಿನ ಮನೋಹರ್ ಪರಿಕ್ಕರ್ ಅವರ ದ್ವಿಪಕ್ಷೀಯ ಮಾತುಕತೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ಯಾಕೆಂದರೆ ಡೊನಾಲ್ಡ್ ಟ್ರಂಪ್ ಈಗಾಗಲೇ ಕಾರ್ಟರ್ ಅವರ ಉತ್ತರಾಧಿಕಾರಿ ನಿವೃತ್ತ ಮರೈನ್ ಕಾರ್ಪ್ಸ್ ಜನರಲ್ ಜೇಮ್ಸ್ ಮಾಟ್ಟಿಸ್ ಅವರ ಹೆಸರನ್ನು ಘೋಷಿಸಿದ್ದಾರೆ.
ಆದರೂ ಕೂಡ ನಿನ್ನೆ ಸಂಜೆ ಮನೋಹರ್ ಪರಿಕ್ಕರ್ ಮತ್ತು ಅಶ್ಟೊನಿ ಕಾರ್ಟರ್ ನಡುವಿನ ಮಾತುಕತೆಯ ಕುರಿತು ಜಂಟಿ ಹೇಳಿಕೆಯನ್ನು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ. ಫಾಸ್ಟ್ ಟ್ರಾಕ್ ಸಹಕಾರ ಮತ್ತು  ಅಮೆರಿಕಾದ ಉನ್ನತ ರಕ್ಷಣಾ ತಂತ್ರಜ್ಞಾನ ಪೂರೈಕೆ ಕುರಿತು ಉಭಯ ನಾಯಕರು ಸಹಿ ಹಾಕಿದ್ದಾರೆ. ಅಮೆರಿಕಾ ದೇಶವು ಭಾರತಕ್ಕೆ ಮುಖ್ಯ ರಕ್ಷಣಾ ತಂತ್ರಜ್ಞಾನದ ಮೂಲವಾಗಿದೆ. ಭಾರತದೊಂದಿಗೆ ಅಮೆರಿಕಾ 10 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ.
ಭಾರತದೊಂದಿಗೆ ಅಮೆರಿಕಾದ ಸಂಬಂಧಕ್ಕೆ ಒತ್ತು ನೀಡಿದ ಕಾರ್ಟರ್, ಮನೋಹರ್ ಪರಿಕ್ಕರ್ ಅವರೊಂದಿಗೆ ನಡೆಸುತ್ತಿರುವ ಏಳನೇ ಸಭೆ ಇದಾಗಿದ್ದು ನಾನು ಅತಿ ಹೆಚ್ಚು ಬಾರಿ ಭೇಟಿ ಮಾಡಿದ ರಕ್ಷಣಾ ಸಚಿವರು ಅವರಾಗಿದ್ದಾರೆ ಎಂದು ಹೇಳಿದ್ದಾರೆ.
SCROLL FOR NEXT