ವಿದೇಶ

ದೆಹಲಿ ನಿಯಮ ಅನುಸರಿಸಿದ ಪ್ಯಾರಿಸ್: ವಾಯುಮಾಲಿನ್ಯ ತಡೆಗೆ ಸಮ-ಬೆಸ ಸಂಚಾರ ನಿಯಮ ಜಾರಿ

Manjula VN

ಪ್ಯಾರಿಸ್; ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವಂತೆಯೇ ಪ್ಯಾರಿಸ್ ನಲ್ಲಿಯೂ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಅನುಸರಿಸಿದ ನಿಯಮವನ್ನೇ ಪ್ಯಾರಿಸ್ ಕೂಡ ಅನುಸರಿಸಲು ಮುಂದಾಗಿದೆ.

ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ದೆಹಲಿಯಲ್ಲಿ ಸಮ-ಬೆಸ ಎಂಬ ಸಂಚಾರ ನಿಯಮವನ್ನು ಜಾರಿಗೆ ತರಲಾಗಿತ್ತು, ಇದರಂತೆ ದೆಹಲಿ ನಿಯಮವನ್ನೇ ಅನುಸರಿಸಲು ಮುಂದಾಗಿರುವ ಪ್ಯಾರಿಸ್ ಕೂಡ, ಸಮ-ಬೆಸ ನಿಯಮವನ್ನು ಜಾರಿಗೆ ತಂದಿದೆ.

ಹೊಸ ನಿಯಮ ಜಾರಿಯಾಗುತ್ತಿದ್ದಂತೆ ಅಲ್ಲಿನ ಸ್ಥಳೀಯರು ಹಾಗೂ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದರು ಎಂದು ವರದಿಗಳು ತಿಳಿಸಿವೆ.

ವಿರೋಧ ನಡುವೆಯೂ ಪ್ಯಾರಿಸ್ ಸರ್ಕಾರ ನಿಯಮವನ್ನು ಜಾರಿ ಮಾಡಿದ್ದು, ಮುಂದಿನ ಗುರುವಾರದವರೆಗೂ ನಿಯಮ ಜಾರಿಯಲ್ಲಿರಲಿದೆ ಎಂದು ಹೇಳಿದೆ. ಖಾಸಗಿ ಕಾರುಗಳ ಮೇಲೆ ಈಗಾಗಲೇ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.

ಹೊಸ ನಿಯಮ ಜಾರಿಗೆ ತಂದ ಕಾರಣ ಹಳೆ ವಾಹನಗಳನ್ನು ತಮ್ಮ ಮನೆಗಳಲ್ಲಿಯೇ ಬಿಟ್ಟ ಅಲ್ಲಿನ ಸಾರ್ವಜನಿಕರು, ಕಚೇರಿ ಹಾಗೂ ಇನ್ನಿತರೆ ಕೆಲಸಗಳಿಗೆ ಓಡಾಡಲು ಸಮಸ್ಯೆ ಎದುರಿಸಿರುವ ದೃಶ್ಯಗಳು ಕಂಡುಬಂದಿದ್ದವು.
ಹೊಸ ನಿಯಮ ಜಾರಿಗೆ ಇದು ಸಕಾಲವಾಗಿರಲಿಲ್ಲ ಎಂದು ಸ್ಥಳೀಯ ಡೇವಿಡ್ ಅಟ್ಟಿಂಗರ್ ಎಂಬುವವರು ಹೇಳಿಕೊಂಡಿದ್ದಾರೆ.

ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಒಂದು ಸಿಗರೇಟ್ ಸೇದುವಾಗ, ಹತ್ತು ಸಿಗರೇಟ್ ನ್ನು ಒಮ್ಮೆಲೆಗೆ ಸೇದುತ್ತಿದ್ದೀನೆನೋ ಎಂಬಂತೆ ಭಾಸವಾಗುತ್ತದೆ ಎಂದು ರಿಕ್ಷಾ ಚಾಲಕನೊಬ್ಬ ಹೇಳಿದ್ದಾನೆ.

ವಾಯುಮಾಲಿನ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಪ್ಯಾರಿಸ್ ನ ಹಲವೆಡೆ ಹೊಗೆ ತುಂಬಿದ ಕಲುಷಿತ ಗಾಳಿ ವಾತಾವರಣ ನಿರ್ಮಾಣವಾಗಿದ್ದು, ಪರಿಣಾಮ ಅಲ್ಲಿನ ಜನರು ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿದ್ದಾರೆಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಲೈಯನ್ ಪ್ರದೇಶದಲ್ಲಿರುವ ಜನರು ವಾಯುಮಾಲಿನ್ಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರುಗಳ ಸಂಚಾರದ ಮೇಲೆ ನಿಷೇಧ ಹೇರಲಾಗಿದೆ ಎಂದು ಆಗ್ನೇಯ ರೋನ್ ಪ್ರದೇಶದ ಅಧಿಕಾರಿಗಳು ಹೇಳಿದ್ದಾರೆ.

ವಾಯುಮಾಲಿನ್ಯಕ್ಕೆ ಕಾರಣವಾಗಿರುವ ವಾಹನಗಳ ಮೇಲೆ ಸರ್ಕಾರ ಮೊದಲು ನಿಷೇಧ ಹೇರಬೇಕಿದೆ ಮತ್ತು ಡೀಸೆಲ್ ಇಂಜಿನ್ ಗಳನ್ನು ಹೊಂದಿರುವ ವಾಹನಗಳ ಮೇಲೆ ನಿಷೇಧ ಹೇರಬೇಕಿದೆ ಎಂದು ಪ್ಯಾರಿಸ್ ನಲ್ಲಿ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಯಾನ್ನಿಕ್ ಜಡೊತ್ ಹೇಳಿದ್ದಾರೆ.

ಟ್ರಾಫಿಕ್, ಡೀಸೆಲ್ ಹಾಗೂ ಆರೋಗ್ಯ ಮೂರರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದರೆ, ಆರೋಗ್ಯವನ್ನು ಬಿಟ್ಟು ಟ್ರಾಫಿಕ್ ಹಾಗೂ ಡೀಸೆಲ್ ನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರಿಗಳನ್ನು ನಾವು ಹೊಂದಿದ್ದೇವೆ. ಇದು ನಮ್ಮ ದುರಾದೃಷ್ಟಕರ ಎಂದು ಜಡೊತ್ ಅವರು ಹೇಳಿದ್ದಾರೆ.

ಪ್ಯಾರಿಸ್ ನಲ್ಲಿ ಸಂಚಾರಿ ನಿಯಮ ಹೇರಿರುವುದು ಇದು ಮೊದಲನೇನಲ್ಲ. ಈವರೆಗೂ ಅಲ್ಲಿನ ಸರ್ಕಾರ ನಾಲ್ಕು ಬಾರಿ 1997, 2014 ಹಾಗೂ 2015 ರಲ್ಲಿಯೂ ಸಂಚಾರಿ ನಿಯಮವನ್ನು ಜಾರಿ ಮಾಡಿತ್ತು.

SCROLL FOR NEXT