ವಿದೇಶ

ಅವನು HE, ಅವಳು SHE, ತೃತೀಯ ಲಿಂಗಿ "ZE"!

Srinivasamurthy VN

ಲಂಡನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಲಂಡನ್ ನ ಪ್ರತಿಷ್ಟಿತ ವಿಶ್ವವಿದ್ಯಾಲಯ ಆಕ್ಸ್ ಫರ್ಡ್ ತೃತೀಯ ಲಿಂಗಿಗಳಿಗೇ ಪ್ರತ್ಯೇಕ ಸರ್ವನಾಮ ಕಲ್ಪಿಸಿದ್ದು, ತೃತೀಯ ಲಿಂಗಿಗಳಿಗೆ He Or She ಬದಲಾಗಿ "ZE" ಪದವನ್ನು  ಬಳಕೆ ಮಾಡಲು ಸೂಚಿಸಿದೆ.

ಈ ಬಗ್ಗೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ವಿವಿ ಆವರಣದಲ್ಲಿ ತೃತೀಯಲಿಂಗಿಗಳನ್ನು ಸಂಬೋದಿಸುವಾಗ ಅವರನ್ನು "ZE" ಎಂಬ ನೂತನ ಸರ್ವನಾಮ ಪದದ ಮುಖಾಂತರ  ಸಂಬೋದಿಸಬೇಕು ಎಂದು ಹೇಳಿದೆ. ಈ ಪದ ಬಳಕೆಯನ್ನು ವಿವಿಯ ಎಲ್ಲ ಕಾರ್ಯಕ್ರಮಗಳಲ್ಲೂ ಬಳಕೆ ಮಾಡಲು ನಿರ್ಧರಿಸಿದ್ದು, ಪ್ರಮುಖವಾಗಿ ವಿವಿಯ ಸೆಮಿನಾರ್ ಗಳು, ವಿಶೇಷ ಉಪನ್ಯಾಸಗಳಲ್ಲಿ ತೃತೀಯ ಲಿಂಗಿಗಳನ್ನು  ಉದ್ದೇಶಿಸಿ ಮಾತನಾಡುವಾಗ ಕಡ್ಡಾಯವಾಗಿ "ZE" ಸರ್ವನಾಮವನ್ನು ಬಳಕೆ ಮಾಡುವಂತೆ ಸೂಚಿಸಿದೆ.

ತೃತೀಯ ಲಿಂಗಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅವರನ್ನು  "he or she" ಎಂದು ಸಂಬೋದಿಸುವ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೆಲ ತೃತೀಯ ಲಿಂಗಿ ಸಂಘಟನೆಗಳು "he or she" ಬಳಕೆಗೆ ವಿರೋಧ  ವ್ಯಕ್ತಪಡಿಸಿದ್ದವು. "he or she" ಪದ ಬಳಕೆ ತಮ್ಮನ್ನು ಅವಮಾನಿಸುವಂತಿದ್ದು, "he or she" ಪದಕ್ಕೆ ಬದಲಾಗಿ ಪ್ರತ್ಯೇಕ ಬದಲೀ ಪದ ಬಳಕೆಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಆಕ್ಸ್  ಫರ್ಡ್ ವಿಶ್ವ ವಿದ್ಯಾಲಯ "he or she" ಪದಕ್ಕೆ ಬದಲಿಯಾಗಿ "ZE" ಪದ ಬಳಕೆ ಮಾಡುವಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಇನ್ನು ತೃತೀಯ ಲಿಂಗಿಗಳಿಗೆ ಆಕ್ಸ್ ಫರ್ಡ್ ವಿವಿ ನೂತನ ಸರ್ವನಾಮ ಬಳಕೆಗೆ ಅನುವು ಮಾಡಿಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮತ್ತೊಂದು ಪ್ರತಿಷ್ಟಿತ ವಿಶ್ವ ವಿದ್ಯಾಲಯ ಕಿಂಗ್ಸ್ ವಿವಿ, ತೃತೀಯ ಲಿಂಗಿಗಳ  ಕುರಿತ ತಟಸ್ಥ ಸರ್ವನಾಮ ಪದ ಬಳಕೆ ಉತ್ತಮವಾದ ನಡೆಯಾಗಿದ್ದು, ಇದನ್ನು ಎಲ್ಲ ಉಪನ್ಯಾಸಗಳಲ್ಲೂ ಬಳಕೆ ಮಾಡಬೇಕು ಎಂದು ಹೇಳಿದೆ.

ಕಳೆದ ತಿಂಗಳಷ್ಟೇ ಇದೇ ಆಕ್ಸಫರ್ಡ್ ವಿಶ್ವವಿದ್ಯಾಲಯ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಚಿಹ್ನೆಯನ್ನು ಬಿಡುಗಡೆ ಮಾಡಿತ್ತು.

SCROLL FOR NEXT