ಜರ್ಮನಿ: 12 ವರ್ಷದ ಬಾಲಕನಿಂದ ಭಯೋತ್ಪಾದಕ ದಾಳಿಯ ಯೋಜನೆ!
ಬರ್ಲಿನ್: 12 ವರ್ಷದ ಅಪ್ರಾಪ್ತನೊಬ್ಬ ಎರಡು ಬಾರಿ ಭಯೋತ್ಪಾದಕ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಘಟನೆ ಜರ್ಮನಿಯಲ್ಲಿ ನಡೆದಿದೆ.
ಪಶ್ಚಿಮ ಜರ್ಮನಿಯ ಲುದ್ವಿಗ್ಶಫೇನ್ ನಗರದಲ್ಲಿ ಕಳೆದ ತಿಂಗಳು ಭಯೋತ್ಪಾದಕ ದಾಳಿ ನಡೆಸಲು ಯತ್ನಿಸಿದ ಬಾಲಕ ಸ್ಥಳೀಯ ಕ್ರಿಸ್ ಮಸ್ ಮಾರ್ಕೆಟ್ ನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯೋಜನೆ ರೂಪಿಸಿದ್ದ ಎಂದು ಸ್ಥಳೀಯ ಅಭಿಯೋಜಕರು ಸ್ಪಷ್ಟಪಡಿಸಿದ್ದಾರೆ.
ನ.26, ಡಿ.5 ರಂದು ಸ್ಫೋಟಕಗಳೊಂದಿಗೆ ಕ್ರಿಸ್ ಮಸ್ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸಿದ್ದ. ಆದರೆ ಸ್ಫೋಟಕಗಳನ್ನು ಸ್ಫೋಟಿಸಲು ಎರಡೂ ಬಾರಿ ವಿಫಲನಾಗಿದ್ದ ಎಂದು ತಿಳಿದುಬಂದಿದೆ. ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿದ್ದ ಬ್ಯಾಗ್ ನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಇರಾಕ್ ಹಾಗೂ ಜರ್ಮನಿ ದೇಶಗಳ ರಾಷ್ಟ್ರೀಯತೆಯನ್ನು ಹೊಂದಿದ್ದ 12 ವರ್ಷದ ಬಾಲಕನನ್ನು ವಿಚಾರಣೆಗೊಳಪಡಿಸಲಾಗಿದೆ.
ಬಂಧಿತ ಯುವಕ ಭಯೋತ್ಪಾದನೆಯತ್ತ ಆಸಕ್ತನಾಗಿರುವ ಸಾಧ್ಯತೆಗಳಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಆದೇಶದ ಮೇರೆಗೆ ಸ್ಫೋಟ ನಡೆಸಲು ತಯಾರಾಗಿದ್ದ ಎಂಬ ಅನುಮಾನ ವ್ಯಕ್ತವಾಗಿರುವುದರ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಪ್ರಕಟಿಸಿದೆ.