ಜಕಾರ್ತಾ: ಇಂಡೋನೇಷ್ಯಾದಲ್ಲಿ ಮತ್ತೊಂದು ವಿಮಾನ ಅಪಘಾತ ಸಂಭವಿಸಿದ್ದು, ಪಪುವಾ ಬಳಿ ಸೇನಾ ವಿಮಾನ ಪತನವಾಗಿ ವಿಮಾನದಲ್ಲಿದ್ದ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾ ಸೇನಾಧಿಕಾರಿಗಳು ತಿಳಿಸಿರುವಂತೆ ಸೇನೆಗೆ ಸೇರಿದೆ ಹರ್ಕ್ಯೂಲಸ್ ಸಿ-130 ವಿಮಾನ ಪತನವಾಗಿದ್ದು, ವಿಮಾನದ ಅವಶೇಷಗಳು ಪಪುವಾ ಬಳಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಸೇನಾ ಮೂಲಗಳ ಪ್ರಕಾರ ಪ್ರಸ್ತುತ ಅಪಘಾತಕ್ಕೀಡಾದ ವಿಮಾನ ಟಿಮಿಕಾದಿಂದ ವಮೇನಾ ಪ್ರದೇಶಕ್ಕೆ ಸೈನಿಕರಿಗೆ ಆಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿತ್ತು. ವಿಮಾನದಲ್ಲಿ ಮೂರು ಪೈಲಟ್ ಗಳು ಹಾಗೂ ಇತರೆ 10 ಸಿಬ್ಬಂದಿಗಳು ಇದ್ದರು ಎಂದು ತಿಳಿದುಬಂದಿದೆ.
ಆದರೆ ವಿಮಾನ ಭಾನುವಾರ ಬೆಳಗ್ಗೆ ಪತನವಾದ್ದರಿಂದ ವಿಮಾನದಲ್ಲಿ ಎಲ್ಲ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಪತನಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಇಂಡೋನೇಷ್ಯಾದ ಸೇನಾಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದಾರೆ.
ವಿಶ್ವದಲ್ಲೇ ಅತ್ಯಂತ ದೊಡ್ಡ ದ್ವೀಪ ಸಮೂಹ ರಾಷ್ಟ್ರ ಎಂಬ ಖ್ಯಾತಿ ಪಡೆದಿರುವ ಇಂಡೋನೇಷ್ಯಾ ವಿಮಾನ ಮತ್ತು ನೌಕಾ ಸಾರಿಗೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಇತ್ತೀಚೆಗೆ ವೈಮಾನಿಕ ಅಪಘಾತಗಳು ಇಲ್ಲಿ ಹೆಚ್ಚಾಗುತ್ತಿವೆ.