ವಾಷಿಂಗ್ಟನ್: ಎಲ್ಲಾ ನಂಬಿಕೆಗಳಿಗೂ ಬೆಲೆ ನೀಡುವುದು ಅಮೆರಿಕನ್ನರು ಒಗ್ಗೂಡಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಅವರು ತಮ್ಮ ಅಧ್ಯಕ್ಷೀಯ ಕೊನೆಯ ಭಾಷಣದಲ್ಲಿ ನಿನ್ನೆ ಶ್ವೇತಭವನದಿಂದ ಅಮೆರಿಕನ್ನರಿಗೆ ಅಂತಿಮ ಕ್ರಿಸ್ ಮಸ್ ಶುಭಾಶಯಗಳನ್ನು ತಿಳಿಸಿದರು.
ನಾವೆಲ್ಲರೂ ಸೋದರ, ಸೋದರಿಯರು ಎಂಬ ಭಾವನೆ ಮೂಡಬೇಕಾದರೆ ನಾವು ಇತರರನ್ನು ಹಾಗೆ ನೋಡಬೇಕು. ನಾವೆಲ್ಲರೂ ಒಂದೇ ಜನಾಂಗಕ್ಕೆ ಸೇರಿದವರು ಎಂಬ ನಂಬಿಕೆ, ಭಾವನೆ ಬಂದರೆ ಜ್ಯೂವಿಷ್ ಅಮೆರಿಕನ್ನರು, ಮುಸ್ಲಿಂ ಅಮೆರಿಕನ್ನರು ಎಂಬ ಬೇಧಭಾವ ತೊಲಗಿ ಎಲ್ಲರೂ ಒಂದೇ ಎಂದು ಭಾವಿಸುತ್ತೇವೆ ಎಂದು ಹೇಳಿದರು.
ಇತ್ತೀಚೆಗಷ್ಟೇ ಮುಗಿದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬಣ ಮತ್ತು ಹಿಲರಿ ಕ್ಲಿಂಟನ್ ಪರ ಬಣದವರು ಎಂದು ಇಬ್ಭಾಗವಾಗಿ ಸಾಕಷ್ಟು ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದರು.
ಇಂತಹ ಸಂದರ್ಭದಲ್ಲಿ ಒಬಾಮಾ ತಮ್ಮ ಪತ್ನಿ ಮಿಶೆಲ್ ಜೊತೆ ಇಡೀ ಅಮೆರಿಕನ್ನರಿಗೆ ಕ್ರಿಸ್ ಮಸ್ ಶುಭಾಶಯ ತಿಳಿಸಿ ಜನರ ಮನಸ್ಸಿನಲ್ಲಿ ಮಂದಹಾಸ ಮೂಡಿಸುವ ಪ್ರಯತ್ನ ಮಾಡಿದರು. 2009ರಲ್ಲಿ ಒಬಾಮಾ ತಮ್ಮ ಪತ್ನಿ ಜೊತೆ ಕ್ರಿಸ್ ಮಸ್ ಶುಭಾಶಯ ತಿಳಿಸುವಾಗ ಕಿಸಿ ಕಿಸಿ ನಕ್ಕಿದ್ದನ್ನು, ನಿನ್ನೆಯ ಶುಭಾಶಯ ಸಂದೇಶದ ಜೊತೆ ಸೇರಿಸಿ ಶ್ವೇತಭವನ ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ.
ಜಾರ್ಜ್ ಡಬ್ಲ್ಯು ಬುಷ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಇಷ್ಟು ವರ್ಷಗಳಲ್ಲಿ ಅಮೆರಿಕಾ ಆರ್ಥಿಕವಾಗಿ ಸಾಕಷ್ಟು ಬೆಳೆದಿದೆ ಎಂದರು.ಕಳೆದ 80 ವರ್ಷಗಳಲ್ಲಿ ಅಮೆರಿಕದಲ್ಲಿ ಇತ್ತೀಚೆಗೆ ಅತ್ಯಂತ ಆರ್ಥಿಕ ದುಸ್ತರವುಂಟಾಗಿದ್ದು 9 ವರ್ಷಗಳಲ್ಲಿ ನಿರುದ್ಯೋಗವೂ ಉಂಟಾಗಿತ್ತು. ಆದರೂ ಅವೆಲ್ಲವುಗಳನ್ನು ದೇಶ ಸಮರ್ಥವಾಗಿ ಎದುರಿಸಿ ಬೇರೆ ರಾಷ್ಟ್ರಗಳ ಮುಂದೆ ಗೌರವ ಗಿಟ್ಟಿಸಿಕೊಂಡಿದೆ ಎಂದರು.
ಅಧ್ಯಕ್ಷೀಯ ಪದವಿ ಬಿಟ್ಟು ಹೋಗುವ ಮುನ್ನ ಎಂದಿನ ಸಂಪ್ರದಾಯದಂತೆ ಒಬಾಮಾ ದಂಪತಿ ಅಮೆರಿಕ ಸೇನಾಪಡೆ ಮತ್ತು ಅವರ ಕುಟುಂಬದವರಿಗೆ ಧನ್ಯವಾದ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos