ವಿದೇಶ

ವಿಕಿಲೀಕ್ಸ್‌ನ ಅಸಾಂಜೆ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ವಿಶ್ವಸಂಸ್ಥೆಯಲ್ಲಿ ಸೋಲಾದರೆ ಶರಣಾಗತಿ ಬಯಕೆ

Shilpa D

ಲಂಡನ್‌: ಪ್ರಪಂಚಾದ್ಯಂತ ಸ್ಫೋಟಕ ಮಾಹಿತಿಗಳ ಬಹಿರಂಗದ ಮೂಲಕ ಸಂಚಲನ ಸೃಷ್ಟಿಸಿದ್ದ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಶರಣಾಗತಿಯ ಇಂಗಿತ ವ್ಯಕ್ತಪಡಿಸಿದ್ದಾರೆ.

ಸ್ವಿಡನ್‌ನಲ್ಲಿ ಅಸಾಂಜೆ ಅವರು ಇಬ್ಬರು ಮಹಿಳೆಯರಿಂದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಇಲ್ಲಿನ ಈಕ್ವೇಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ನೆಲೆಸಿರುವುದು ‘ಅಕ್ರಮ ವಶ’ ಅಲ್ಲ ಎಂದು ವಿಶ್ವಸಂಸ್ಥೆಯ ಸಮಿತಿಯು ಘೋಷಿಸಿದರೆ, ಶುಕ್ರವಾರ ಮಧ್ಯಾಹ್ನವೇ ಬ್ರಿಟನ್‌ ಪೊಲೀಸರಿಗೆ ಶರಣಾಗುವೆ ಎಂದು ಪ್ರಕಟಿಸಿದ್ದಾರೆ.

‘ಇಂಗ್ಲೆಂಡ್‌ ಹಾಗೂ ಸ್ವಿಡನ್‌ ವಿರುದ್ಧದ ಪ್ರಕರಣಗಳಲ್ಲಿ ಸೋಲು ಕಂಡಿರುವುದಾಗಿ ವಿಶ್ವಸಂಸ್ಥೆ ನಾಳೆ ಪ್ರಕಟಿಸಿದರೆ, ನಾನು ಶುಕ್ರವಾರ ಮಧ್ಯಾಹ್ನವೇ ರಾಜತಾಂತ್ರಿಕ ಕಚೇರಿಯಿಂದ ಹೊರಬಂದು ಬ್ರಿಟಿಷ್ ಪೊಲೀಸರಿಗೆ ಶರಣಾಗುವೆ. ಇದಕ್ಕಿಂತಲೂ  ಅರ್ಥಪೂರ್ಣವಾದ ಭರವಸೆಯಲ್ಲಿ ಹುರುಳಿಲ್ಲ’ ಎಂದಿದ್ದಾರೆ.

‘ಆದರೆ, ವಿಶ್ವಸಂಸ್ಥೆ ನನ್ನ ಪರವಾಗಿ ತೀರ್ಪು ನೀಡಿ, ನಾನು ಜಯಿಸಿದರೆ, ಕೂಡಲೇ ನನ್ಮ ಪಾಸ್‌ಪೋರ್ಟ್‌ ಅನ್ನು ಮರಳಿಸಬೇಕು. ಭವಿಷ್ಯದಲ್ಲಿ ಬಂಧನ ಯತ್ನಗಳನ್ನು ಕೈಬಿಡಬೇಕು ಎಂದು ನಾನು ನಿರೀಕ್ಷಿಸುವೆ’ ಎಂದು ವಿಕಿಲೀಕ್ಸ್‌ ಟ್ವಿಟ್ಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

44 ವರ್ಷದ ಅಸಾಂಜೆ 2012ರಿಂದಲೂ ಸೆಂಟ್ರಲ್ ಲಂಡನ್ನಿನಲ್ಲಿರುವ ಈಕ್ವೇಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ನೆಲೆಸಿದ್ದಾರೆ. ಅಂದಿನಿಂದಲೂ ಆ ಕಟ್ಟದ ಸುತ್ತಲೂ ಬ್ರಿಟಿಷ್ ಸರ್ಕಾರವು ಪೊಲೀಸರನ್ನು ನಿಯೋಜಿಸಿ, ತೀವ್ರತರ ನಿಗಾ ಇಟ್ಟಿದೆ. ಸ್ವಿಡನ್‌ಗೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಅಸಾಂಜೆ, ಈಕ್ವೇಡಾರ್ ರಾಜತಾಂತ್ರಿಕ ಕಚೇರಿಯ ರಕ್ಷಣೆಗೆ ಮೊರೆಹೋಗಿದ್ದರು.  ಆದರೆ, ಈ ಆರೋಪಗಳನ್ನು ಅಸಾಂಜೆ ಅಲ್ಲಗಳೆದಿದ್ದಾರೆ. ವಿಶ್ವಸಂಸ್ಥೆಯ ‘ನಿರಂಕುಶ ವಶ’ ಮೇಲಿನ ಸಮಿತಿಯು ಫೆಬ್ರುವರಿ 5ರಂದು ತನ್ನ ಆದೇಶ ಪ್ರಕಟಿಸಲಿದೆ.

SCROLL FOR NEXT