ಲಂಡನ್: ಐಎಸ್ಐಎಸ್ ಸಂಘಟನೆಯ ಉಗ್ರನೊಬ್ಬ ಇಸ್ಲಾಂ ಧರ್ಮ ತೊರೆದಳು ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ ಸಾರ್ವಜನಿಕವಾಗಿ ಆಕೆಯ ತಲೆಗೆ ಗುಂಡಿಕ್ಕಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ.
20 ವರ್ಷದ ಜಿಹಾದಿ ಕಾರ್ಯಕರ್ತ ಅಲಿ ಸಕ್‌ರ್ ಅಲ್ ಕಾಸೀಮ್ 45 ವರ್ಷದ ತನ್ನ ತಾಯಿ ಲೆನಾಳನ್ನು ಭಾರೀ ಜನಸಮೂಹದ ಎದುರೇ ಗುಂಡಿಕ್ಕಿ ಕೊಂದಿದ್ದಾನೆಂದು "ರಿಬ್ಸ್' (ರಕ್ಕಾ ಈಸ್ ಬೀಯಿಂಗ್ ಸ್ಲಾಟರ್ಡ್ ಸೈಲೆಂಟ್‌ಲೀ) ಎಂಬ ಸಮೂಹ ಹೇಳಿದೆ.
ಇಸ್ಲಾಂ ಧರ್ಮ ತೊರೆದವರನ್ನು, ಅಥವಾ ತೊರೆಯುವಂತೆ ಇತರರನ್ನು ಪ್ರೇರೇಪಿಸುವವರನ್ನು ಮತ್ತು ಐಎಸ್ಐಎಸ್ ವಿರುದ್ಧ ಧ್ವನಿ ಎತ್ತುವವರನ್ನು ನಿರ್ದಯವಾಗಿ ಕೊಲ್ಲಬೇಕೆಂಬುದು ಐಎಸ್ಐಎಸ್ ಅಪ್ಪಣೆಯಾಗಿದೆ.
"ನನ್ನ ತಾಯಿ ಲೆನಾ ಅಲ್ ಕಾಸೀಂ ಇಸ್ಲಾಂ ಧರ್ಮವನ್ನು ತೊರೆದದ್ದು ಮಾತ್ರವಲ್ಲದೆ ನಾನು ಇಸ್ಲಾಮಿಕ್ ಸಂಘಟನೆಯನ್ನು (ಐಸಿಸ್) ತೊರೆದು ರಕ್ಕಾದಿಂದ ಆಕೆಯ ಜತೆಗೂಡಿ ಪಲಾಯನ ಮಾಡುವಂತೆ ನನಗೆ ಬೋಧಿಸುತ್ತಿದ್ದಳು. ಈ ವಿಷಯವನ್ನು ನಾನು ಐಎಸ್ಐಎಸ್ ಉನ್ನತರಿಗೆ ತಿಳಿಸಿದಾಗ ಅವರು ಆಕೆಗೆ ಮರಣದಂಡನೆಯನ್ನು ವಿಧಿಸಿದರು ಮತ್ತು ಅದನ್ನು ಜಾರಿಗೊಳಿಸುವ ಸಲುವಾಗಿ ನಾನೇ ಆಕೆಯನ್ನು ಬಹಿರಂಗವಾಗಿ ಗುಂಡು ಹೊಡೆದು ಸಾಯಿಸುವಂತೆ ನನಗೆ ಅವರು ಆದೇಶಿಸಿದರು' ಎಂದು ಅಲಿ ಸಕ್‌ರ್ ಅಲ್ ಕಾಸೀಮ್ ಹೇಳಿದ್ದಾನೆ. ಆದರೆ ಈತನ ಈ ಕೃತ್ಯವು ಇಸ್ಲಾಂ ಧರ್ಮದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಮತಪಂಡಿತರು ಹೇಳಿದ್ದಾರೆ.
ಇಸ್ಲಾಂ ಧರ್ಮ ತೊರೆದ ತಾಯಿಯನ್ನು ಆಕೆಯ ಮಗನೇ ಬಹಿರಂಗವಾಗಿ ಗುಂಡು ಹೊಡೆದು ಸಾಯಿಸುವಂತೆ ಐಎಸ್ಐಎಸ್ ಏಕೆ ಅಪ್ಪಣೆ ಕೊಡಿಸಿದೆ ಎನ್ನುವುದು ತಿಳಿದುಬಂದಿಲ್ಲ. ಸಿರಿಯಾದ ರಕ್ಕಾದ ಹೊರಭಾಗದಲ್ಲಿರುವ ಅಂಚೆ ಕಚೇರಿಯ ಬಳಿಯೇ ಲೆನಾ ಕೆಲಸ ಮಾಡಿಕೊಂಡಿದ್ದಳು. ಅಂತೆಯೇ ಆಕೆಯನ್ನು ಅಲ್ಲೇ ಗುಂಡು ಹೊಡೆದು ಸಾಯಿಸುವಂತೆ ಆಕೆಯ ಮಗನಿಗೆ ಐಎಸ್ಐಎಸ್ ಅಪ್ಪಣೆ ಕೊಟ್ಟಿತ್ತು ಎಂದು ಗೊತ್ತಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos