ಪೇಶಾವರ: ವಾಯುವ್ಯ ಪಾಕಿಸ್ತಾನದ ಚರ್ಸಾದ್ದಾ ಜಿಲ್ಲೆಯ ವಿಶ್ವ ವಿದ್ಯಾಲಯವೊಂದರ ಮೇಲೆ ಉಗ್ರರ ಗುಂಪೊಂದು ಬುಧವಾರ ಮುಂಜಾನೆ ದಾಳಿಮಾಡಿರುವುದಾಗಿ ತಿಳಿದುಬಂದಿದೆ.
ಚರ್ಸಾದ್ದಾ ಜಿಲ್ಲೆಯಲ್ಲಿರುವ ಬಚಾ ಖಾನ್ ವಿಶ್ವವಿದ್ಯಾಲಯದ ಮೇಲೆ ಉಗ್ರರ ಗುಂಪೊಂದು ದಾಳಿ ಮಾಡಿದ್ದು, ವಿಶ್ವವಿದ್ಯಾಲಯದೊಳಗೆ ಭಾರೀ ಪ್ರಮಾಣದಲ್ಲಿ ಸ್ಫೋಟದ ಶಬ್ಧಗಳು ಕೇಳಿಬರುತ್ತಿದೆ ಮೂಲಗಳಿಂದ ತಿಳಿದುಬಂದಿದೆ.
ಉಗ್ರರ ದಾಳಿ ಕುರಿತಂತೆ ಮಾಹಿತಿ ಕೂಡಲೇ ಸ್ಥಳಕ್ಕಾಗಮಿಸಿರುವ ಭದ್ರತಾ ಸಿಬ್ಬಂದಿಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈಗಾಗಲೇ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. 50 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಈಗಾಗಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ದಾಳಿಯಲ್ಲಿ ಈಗಾಗಲೇ ವಿವಿಯ ನಾಲ್ವರು ಸಿಬ್ಬಂದಿಗಳು ಗಾಯಾಗೊಂಡಿದ್ದು, 15 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಈದಿಯ ಸ್ವಯಂ ಸೇವಕರೊಬ್ಬರು ಮಾಹಿತಿ ನೀಡಿದ್ದಾರೆ.
ಉಗ್ರರರನ್ನು ಸದೆಬಡಿಯಲು ಈಗಾಗಲೇ ಸ್ಥಳಕ್ಕಾಗಮಿಸಿರುವ ವಿಶೇಷ ಭದ್ರತಾ ಪಡೆಗಳು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. ಪ್ರಸ್ತುತ ವಿಶ್ವವಿದ್ಯಾಲಯದೊಳಗೆ 3000 ವಿದ್ಯಾರ್ಥಿಗಳು ಹಾಗೂ 600 ಅತಿಧಿಗಳಿದ್ದಾರೆಂದು ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಗಳು ಇನ್ನೂ ತಿಳಿದುಬಂದಿಲ್ಲ.
ದಾಳಿಕೋರರನ್ನು ನಾನು ನೋಡಿದೆ: ಪ್ರತ್ಯಕ್ಷದರ್ಶಿ
ವಿಶ್ವವಿದ್ಯಾಲಯದ ಒಳಗೆ ಬಂದ ಉಗ್ರರು ಮೊದಲು ಶಾಲೆಯ ಮುಖ್ಯದ್ವಾರದ ಬಳಿ ನಿಂತಿದ್ದರು. ಮೂವರು ಭಯೋತ್ಪಾದಕರು ದಾಳಿ ನಡೆಸುತ್ತಿದ್ದರು. ಬಂದೂಕಿನಿಂದ ಗುಂಡಿನ ದಾಳಿ ಮಾಡುತ್ತಿದ್ದರು. ಶಾಲೆಯ ಮುಖ್ಯ ದ್ವಾರದ ಬಳಿ ಓರ್ವ ಉಗ್ರ ನಿಂತಿದ್ದಾನೆ. ಮತ್ತೊಬ್ಬ ಉಗ್ರರ ಮುಖ್ಯ ದ್ವಾರ ಕೊನೆಯಲ್ಲಿ ನಿಂತಿದ್ದಾನೆ ಹಾಗೂ ಮೂರನೇ ಉಗ್ರ ವಿವಿ ಗೋಡೆಯ ಬಳಿ ನಿಂತಿದ್ದಾನೆಂದು ಹೇಳಿದ್ದಾನೆ.
ದಾಳಿಯಾಗುತ್ತಿದ್ದಂತೆ ವಿವಿಯ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದ್ದು, ಪೊಲೀಸರು ಬರುತ್ತಿದ್ದಂತೆ ಉಗ್ರರು ತಮ್ಮ ತಮ್ಮ ಸ್ಥಾನಗಳಲ್ಲಿ ನಿಂತುಕೊಳ್ಳುತ್ತಿರುವುದನ್ನು ನಾನು ನೋಡಿದೆ ಎಂದು ಹೇಳಿದ್ದಾನೆ.