ನವದೆಹಲಿ: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಮೂರನೇ ಮದುವೆಯಾಗಿದ್ದಾರೆ ಎಂದು ಪಾಕಿಸ್ತಾನ ಟಿವಿ ಚಾನೆಲ್ ಗಳು ವರದಿ ಮಾಡಿವೆ.
63 ವರ್ಷದ ಇಮ್ರಾನ್ ಅವರು ಮರಿಯಮ್ ಜಿಯೋ ಎಂಬಾಕೆಯನ್ನು ಲಂಡನ್‌ನಲ್ಲಿ ವಿವಾಹವಾಗಿದ್ದಾರೆ. ಆಕೆ ಅವರ ಆಧ್ಯಾತ್ಮಿಕ ಗುರು ಎಂದು ಹೇಳಲಾಗುತ್ತಿದೆ.
ತಾವು ಮತ್ತೊಂದು ಮದುವೆಯಾಗಲು ಇಚ್ಛಿಸಿದ್ದೀರಾ ಎಂದು ಕೆಲ ದಿನಗಳ ಹಿಂದೆ ಮಾಧ್ಯಮವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಖಾನ್ ಸಕಾರಾತ್ಮಕ ಉತ್ತರ ನೀಡಿದ್ದರು. ಇಮ್ರಾನ್ ಅವರು ಈ ಮೊದಲು ಎರಡು ಮದುವೆಯಾಗಿದ್ದು, ಎರಡನೆಯ ಪತ್ನಿಗೆ ಕಳೆದ 7 ತಿಂಗಳ ಹಿಂದೆ ತಲಾಕ್ (ವಿಚ್ಛೇದನ) ನೀಡಿದ್ದರು.
ಆದರೆ ವಿವಿಧ ಚಾನೆಲ್ ಗಳು ಹಲವು ರೀತಿಯಲ್ಲಿ ವರದಿ ಮಾಡಿವೆ. ಇಮ್ರಾನ್ ಖಾನ್ ಲಂಡನ್ ನಲ್ಲಿ ಮನೇಕಾ ಕುಟುಂಬದ ಮಹಿಳೆ ಜೊತೆ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.
ಆದರೆ ತಮ್ಮ ಮದುವೆಯ ಕುರಿತ ಸುದ್ದಿಯನ್ನು ಇಮ್ರಾನ್ ಖಾನ್ ಅಲ್ಲಗಳೆದಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿ ಸತ್ಯಕ್ಕೆ ದೂರವಾದುದು. ಇದರಲ್ಲಿ ಯಾವುದೇ ವಾಸ್ತವಾಂಶವಿಲ್ಲ ಎಂದು ಹೇಳಿದ್ದಾರೆ.