Qandeel Baloch Pic courtesy: facebook page
ಇಸ್ಲಾಮಾಬಾದ್: ಬಿಗ್ ಬಾಸ್ ಖ್ಯಾತಿಯ ಪಾಕಿಸ್ತಾನ ಮಾಡೆಲ್ ಕಂದೀಲ್ ಬಲೋಚ್ ರನ್ನು ಆಕೆಯ ಸಹೋದರ ಹತ್ಯೆಗೀಡು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹರಿದುಬರುತ್ತಿರುವ ಪ್ರತಿಕ್ರಿಯೆಗಳು ಇನ್ನೂ ನಿಂತಿಲ್ಲ. ಇದೊಂದು ಮರ್ಯಾದಾ ಹತ್ಯೆ ಎಂದು ಹೇಳಲಾಗುತ್ತಿದ್ದರೂ ಸಾರ್ವಜನಿಕರು ಸಿಟ್ಟು, ಆಕ್ರೋಶ ಮತ್ತು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ಈ ಎಲ್ಲ ಪ್ರತಿಕ್ರಿಯೆಗಳ ಮಧ್ಯೆ ಪಾದ್ರಿಯೊಬ್ಬರು ನೀಡಿರುವ ಪ್ರತಿಕ್ರಿಯೆ ಪ್ರತ್ಯೇಕವಾಗಿ ನಿಲ್ಲುತ್ತದೆ. ಕಂದೀಲ್ ನ ಕೊಲೆ ಇತರರಿಗೊಂದು ಪಾಠ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಪಾದ್ರಿ ಮುಫ್ತಿ ಅಬ್ದುಲ್ ಖಾವಿ ಕಂದೀಲ್ ಬಲೋಚ್ ಳೊಂದಿಗೆ ಕಳೆದ ತಿಂಗಳು ಸೆಲ್ಫಿ ತೆಗೆದುಕೊಂಡಿದ್ದಕ್ಕಾಗಿ ಧಾರ್ಮಿಕ ಸಂಘಟನೆ ಅವರನ್ನು ವಜಾಗೊಳಿಸಿತ್ತು.
ಹತ್ಯೆ ಕುರಿತು ಪ್ರತಿಕ್ರಿಯೆ ನೀಡಿರುವ ಖಾವಿ, ಯಾರಾದರೂ ಪಾದ್ರಿಗಳನ್ನು ಅವಮಾನಿಸಿದರೆ ಅದರಿಂದ ಏನಾಗುತ್ತದೆ ಎಂದು ಕಂದೀಲ್ ಬಲೋಚ್ ಪ್ರಕರಣದಿಂದ ಕಲಿಯಬೇಕು.
ಧಾರ್ಮಿಕ ಪಾದ್ರಿಗಳು ಇಸ್ಲಾಂನ ಧಾರ್ಮಿಕ ಮುಖಗಳು, ಅವರ ಗೌರವದ ಜೊತೆ ಚೆಲ್ಲಾಟವಾಡುವ ಧೈರ್ಯವನ್ನು ಜನರು ತೋರಿಸಬಾರದು. ಅವರಿಗೆ ಕೇಡನ್ನುಂಟುಮಾಡಲು ಯಾರಾದರೂ ಪ್ರಯತ್ನಿಸಿದರೆ ದೇವರು ಶಿಕ್ಷೆ ಕೊಡುತ್ತಾರೆ. ತನ್ನ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಬರುವಂತೆ ನಾನು ಕಂದೀಲಾಗೆ ತಿಳಿ ಹೇಳಿದ್ದೆ. ಅಲ್ಲದೆ ಆಕೆ ಹೊಸ ಜೀವನ ನಡೆಸಲಿ ಎಂದು ಮದುವೆ ಪ್ರಸ್ತಾಪವೊಂದನ್ನು ಕೂಡ ಅವಳ ಮುಂದಿಟ್ಟಿದ್ದೆ ಎಂದು ಮುಫ್ತಿ ಅಬ್ದುಲ್ ಖಾವಿ ಹೇಳಿದ್ದಾರೆ.
ಸಾರ್ವಜನಿಕವಾಗಿ ಮುಫ್ತಿ ಅಬ್ದುಲ್ ಖಾವಿಯವರನ್ನು ಅವಮಾನಿಸಿದ್ದಕ್ಕಾಗಿ ಅವರ ಬೆಂಬಲಿಗರು ಕಂದೀಲಾಗೆ ಜೀವಬೆದರಿಕೆಯೊಡ್ಡಿದ್ದರು ಎಂದು ವರದಿಯೊಂದು ಹೇಳಿದೆ. ಆ ಬಳಿಕ ಆಕೆ ಆಂತರಿಕ ಸಚಿವಾಲಯದ ಮೊರೆಹೋಗಿ ಭದ್ರತೆ ಕೇಳಿದ್ದಳು. ಆದರೆ ಭದ್ರತೆ ನೀಡಲು ಸಚಿವಾಲಯ ನಿರಾಕರಿಸಿತ್ತು.
ತನ್ನ ಸಹೋದರನಿಂದಲೇ ಬರ್ಭರವಾಗಿ ಹತ್ಯೆಗೀಡಾದ ಕಂದೀಲ್ ಬಲೋಚ್ ಳ ಅಂತಿಮ ವಿಧಿವಿಧಾನ ಪೂರ್ವಜರ ಗ್ರಾಮವಾದ ಶಾಹ್ ಸದ್ದರ್ದಿನ್ ನಲ್ಲಿ ನೆರವೇರಿತು.