ವಿದೇಶ

ಉಗ್ರ ವನಿಯನ್ನು ಹುತಾತ್ಮ ಎಂದಿದ್ದ ಪಾಕಿಸ್ತಾನ ನಟನ ಫೇಸ್ ಬುಕ್ ಖಾತೆ ಡಿಆಕ್ಟೀವ್

Srinivas Rao BV

ಇಸ್ಲಾಮಾಬಾದ್: ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಗುಂಡಿಗೆ ಬಲಿಯಾದ ಉಗ್ರ ಬುರ್ಹಾನ್ ಮುಜಾಫರ್ ವನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹುತಾತ್ಮ ಎಂದು ಹೇಳಿದ್ದ ಪಾಕಿಸ್ತಾನದ ಖ್ಯಾತ ನಟ ಹಮ್ಜಾ ಅಲಿ ಅಬ್ಬಾಸಿಯ ಖಾತೆಯನ್ನು ಫೇಸ್ ಬುಕ್ ನಿಷ್ಕ್ರಿಯಗೊಳಿಸಿದೆ.

ಭಾರತ ಹಾಗೂ ಉಳಿದ ಪಶ್ಚಿಮ ರಾಷ್ಟ್ರಗಳಿಗೆ ವನಿ ಸೇನಾಪಡೆಯ ಗುಂಡೇಟಿಗೆ ಬಲಿಯಾದ ಉಗ್ರನೇ ಇರಬಹುದು, ಆದರೆ ನನಗೆ ಮಾತ್ರ ಆತ ಹುತಾತ್ಮ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಉಗ್ರ ವನಿಯನ್ನು ಹಮ್ಜಾ ಅಲಿ ಅಬ್ಬಾಸಿ ಹೊಗಳಿದ್ದರು.  ಉಗ್ರನನ್ನು ಹೊಗಳಿದ್ದಕ್ಕಾಗಿ ಫೇಸ್ ಬುಕ್ ಸಂಸ್ಥೆ ಹಮಾಜ್ ಅಲಿಯ ಖಾತೆಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿತ್ತು.
 
ಹಮ್ಜಾ ಅಲಿಯ ಖಾತೆ ಎರಡು ದಿನಗಳ ನಂತರ ಮತ್ತೆ ಸಕ್ರಿಯವಾಗಿದ್ದು, ಎರಡು ದಿನಗಳ ನಂತರ ಫೇಸ್ ಬುಕ್ ನ್ನು ಬಳಸಲು ಸಾಧ್ಯವಾಗುತ್ತಿದೆ. ಆದರೆ ಫೇಸ್ ಬುಕ್ ಒಂದು ಸಂಸ್ಥೆ ಏನನ್ನು ಬೇಕಾದರೂ ಸೆನ್ಸಾರ್ ಮಾಡಬಹುದು ಹಾಗಾದಲ್ಲಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇದ್ದೇವೆ ಎಂದು ಹೇಳುವಂತಿಲ್ಲ ಎಂದು ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯವನ್ನು ಹೆಚ್ಚು ಹಂಚಿಕೆ ಮಾಡಲು ಕರೆ ನೀಡಿರುವ ಅಬ್ಬಾಸ್, ಕಾಶ್ಮೀರಿಗಳ ಪರವಾಗಿ ಧ್ವನಿ ಎತ್ತುವುದು ಮಾತ್ರ ನಮಗೆ ಸಾಧ್ಯ ಎಂದು ಹೇಳಿದ್ದಾರೆ.

SCROLL FOR NEXT