ವಿದೇಶ

ಭಾರತವನ್ನು ವಿಶೇಷ ಪಾಲುದಾರ ರಾಷ್ಟ್ರವಾಗಿ ಗುರುತಿಸುವ ಮಸೂದೆ ಅಂಗೀಕರಿಸಲು ಅಮೆರಿಕ ಸೆನೆಟ್ ವಿಫಲ

Srinivas Rao BV

ವಾಷಿಂಗ್ ಟನ್: ಭಾರತವನ್ನು ಅಮೆರಿಕದ ಜಾಗತಿಕ ತಂತ್ರಕುಶಲತೆಯ, ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಅಧಿಕೃತವಾಗಿ ಮಾನ್ಯಮಾಡಲು ಸಹಕಾರಿಯಾಗಿದ್ದ ಅಮೆರಿಕದ ಮಸೂದೆಯನ್ನು ಅಂಗೀಕರಿಸಲು ಸೆನೆಟ್ ವಿಫಲವಾಗಿದೆ.

ಅಮೆರಿಕದ ರಫ್ತು ನಿಯಂತ್ರಣ ನಿಯಮಗಳನ್ನು ಬದಲಾವಣೆ ಮಾಡುವ ಮಸೂದೆ ಸೆನೆಟ್ ನಲ್ಲಿ ಅಂಗೀಕಾರವಾಗಿದ್ದಿದ್ದರೆ ಭಾರತವನ್ನು ಅಮೆರಿಕದ ಜಾಗತಿಕ ತಂತ್ರಕುಶಲತೆಯ, ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಗುರುತಿಸಲು ನೆರವಾಗುತ್ತಿತ್ತು. ಆದರೆ ಮಸೂದೆ ಅಂಗೀಕಾರವಾಗದೇ ಇರುವ ಹಿನ್ನೆಲೆಯಲ್ಲಿ ಈಗ ಆ ಅವಕಾಶ ತಪ್ಪಿದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜೂ.8 ರಂದು ಅಮೆರಿಕ ಕಾಂಗ್ರೆಸ್ ನ್ನು ಉದ್ದೇಶಿಸಿ ಮಾತನಾಡಿದ ನಂತರದ ದಿನದಂದು, ರಿಪಬ್ಲಿಕನ್ ಪಕ್ಷದ ಪ್ರಮುಖ ಸಂಸದ ಜಾನ್ ಎಂಸಿ ಕೇನ್, ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆ(ಎನ್ ಡಿಎಎ-17)ಗೆ ತಿದ್ದುಪಡಿ ಮಂಡಿಸಿದ್ದರು. ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದಿದ್ದರೆ ಭಾರತವನ್ನು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವೆಂದು ಗುರುತಿಸಲು ಸಾಧ್ಯವಾಗುತ್ತಿತ್ತು. ಇದಕ್ಕೆ ಪೂರಕವೆಂಬಂತೆ, ಭಾರತಕ್ಕೆ ರಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲು ಅಮೆರಿಕ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಜಂಟಿ ಹೇಳಿಕೆ ನೀಡಿದ್ದರು.

ಅಮೆರಿಕ ಸೆನೆಟ್ ನಲ್ಲಿ ಉಭಯಪಕ್ಷೀಯ ಸದಸ್ಯರ 85 -13 ಮತಗಳ ಮೂಲಕ ಎನ್ ಡಿಎಎ-17 ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಯಿತಾದರೂ, ಪ್ರಮುಖವಾಗಿದ್ದ (ಎಸ್ಎ 4618 ) ತಿದ್ದುಪಡಿಗೆ ಅಂಗೀಕಾರ ಸಿಗದ ಹಿನ್ನೆಲೆಯಲ್ಲಿ ಸೆನೆಟ್ ನಲ್ಲಿ ಪೂರ್ಣಪ್ರಮಾಣದಲ್ಲಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಿಲ್ಲ.             
ಸೆನೆಟ್ ತಿದ್ದುಪಡಿ ಸಂಖ್ಯೆ 4618 ಎನ್ ಡಿಎಎ ಗೆ ಅಳವಡಿಕೆ ಮಾಡಲಾಗಿರಲಿಲ್ಲ ಎಂದು ಅಮೆರಿಕ ರಿಪಬ್ಲಿಕನ್ ಪಕ್ಷದ ಪ್ರಮುಖ ಸಂಸದ ಜಾನ್ ಎಂಸಿ ಕೇನ್ ತಿಳಿಸಿದ್ದು ಮಸೂದೆ ಅಂಗೀಕಾರವಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಭಯಪಕ್ಷೀಯ ಬೆಂಬಲವಿದ್ದರೂ ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಿ ಮತ ಹಾಕಲು ಸೆನೆಟ್ ವಿಫಲವಾಗಿದೆ ಎಂದು ಜಾನ್ ಎಂಸಿ ಕೇನ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 
ಭಾರತ ಮಾತ್ರವಲ್ಲದೇ ಅಫ್ಘಾನ್ ವಿಷಯದಲ್ಲೂ ಇದೇ ಸ್ಥಿತಿ ಉಂಟಾಗಿದ್ದು, ಯುದ್ಧ ಸಂದರ್ಭದಗಳಲ್ಲಿ ಅಮೆರಿಕಗೆ ಸಹಾಯ ಮಾಡಿದ ಇಂದಿಗೂ ಅಪಾಯ ಎದುರಿಸುತ್ತಿರುವ ಅಫ್ಘಾನಿಸ್ತಾನದವರಿಗೆ ವಿಶೇಷ ವಲಸೆ ವೀಸಾಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳಲು ಸೆನೆಟ್ ಗೆ ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಮಸೂದೆ ವಿಷಯಗಳಲ್ಲಿ ಆಗುವಂತೆಯೇ ರಾಜತಾಂತ್ರಿಕ ವಿಷಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ನೀಡುವ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆ ಒಬ್ಬ ಸಂಸದನಿಂದ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

SCROLL FOR NEXT