ಡೆನ್ವರ್: ಹೆತ್ತ ಮಕ್ಕಳ ರಕ್ಷಣೆಗೆ ತಾಯಿ ಏನನ್ನೂ ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆಂಬುದಕ್ಕೆ ಈ ಘಟನೆ ಉದಾಹರಣೆಯೆನ್ನಬಹುದು.
ಪರ್ವತ ಸಿಂಹದ ಬಾಯಲ್ಲಿ ಸಿಲುಕಿ ನರಳಾಡುತ್ತಿದ್ದ ತನ್ನ 5 ವರ್ಷದ ಮಗುವನ್ನು ರಕ್ಷಿಸಲು ತಾಯಿಯೊಬ್ಬಳು ಸಿಂಹದೊಂದಿಗೆ ಕಾದಾಡಿ ಕೊನೆಗೂ ಮಗುವನ್ನು ರಕ್ಷಿಸಿರುವ ಘಟನೆಯೊಂದು ಪಶ್ಚಿಮ ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ ನಡೆದಿದೆ.
ರೆಸಾರ್ಟ್ ನ ಹೊರಭಾಗದಲ್ಲಿ ತನ್ನ ಸಹೋದರನೊಂದಿಗೆ ಆಟವಾಡುತ್ತಿದ್ದ ಮಗುವಿನ ಬಳಿ ಪರ್ವತ ಸಿಂಹವೊಂದು ಬಂದಿದೆ. ಸಿಂಹವನ್ನು ನೋಡುತ್ತಿದ್ದಂತೆ ಸಹೋದರ ತಮ್ಮನನ್ನು ಬಿಟ್ಟು ಓಡಿಹೋಗಿದ್ದಾನೆ. ಕೂಡಲೇ ಸಿಂಹ ಮಗುವಿನ ತಲೆಗೆ ಬಾಯಿ ಹಾಕಿದೆ. ಕ್ಷಣಾರ್ಧದಲ್ಲಿ ಮಗುವಿನ ಚೀರಾಟವನ್ನು ಕೇಳಿಸಿಕೊಂಡ ತಾಯಿ ಹೊರ ಬಂದು ನೋಡಿದಾಗ ಸಿಂಹದ ಬಾಯಲ್ಲಿ ತನ್ನ ಮಗುವಿನ ತಲೆ ಇರುವುದನ್ನು ನೋಡಿ ಗಾಬರಿಯಾಗಿದ್ದಾಳೆ.
ಕೂಡಲೇ ಜೀವ ಭಯವನ್ನು ಬಿಟ್ಟು ಸಿಂಹದೊಂದಿಗೆ ಕಾದಾಡಲು ಮುಂದಾಗಿದ್ದಾಳೆ. ಈ ವೇಳೆ ಮಗುವನ್ನು ರಕ್ಷಿಸುವ ಸಲುವಾಗಿ ಸಿಂಹ ಬಾಯಿಯನ್ನು ಹಿಡಿದು ತನ್ನ ಬಲಗೈಯನ್ನು ಅದರ ಬಾಯಿಗೆ ಹಾಕಿ ಮಗುವನ್ನು ಬಿಡಿಸಿಕೊಳ್ಳಲು ಯತ್ನಿಸಿದ್ದಾಳೆ. ಇದರಂತೆ ಮಗುವನ್ನು ಬಿಟ್ಟ ಸಿಂಹ ತಾಯಿಯ ಕೈಯನ್ನು ಗಾಯ ಮಾಡಿ, ನಂತರ ಹೆದರಿ ಓಡಿಹೋಗಿದೆ.
ಘಟನೆ ಕುರಿತಂತೆ ವಿವರಣೆ ನೀಡಿರುವ ಅಧಿಕಾರಿ ಮೈಕೆಲ್ ಬುಗ್ಲಿಯೋನ್ ಅವರು ತಾಯಿ ಹಾಗೂ ಮಗುವಿನ ಹೆಸರನ್ನು ಮಾತ್ರ ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.
ನನ್ನ ಪ್ರಾಣಕ್ಕಿಂತ ನನ್ನ ಮಗು ನನಗೆ ಅತ್ಯಂತ ಮುಖ್ಯವಾಗಿತ್ತು. ಹೀಗಾಗಿ ಸಿಂಹದೊಂದಿಗೆ ಕಾದಾಡಲು ಮುಂದಾಗಿದ್ದೆ. ಸಿಂಹದ ಮೇಲೆ ಬಿದ್ದ ನಾನು ಅದರ ಬಾಯಿಯಿಂದ ಮಗುವನ್ನು ಬಿಡಿಸಲು ಯತ್ನಿಸಿದೆ. ಮಗುವನ್ನು ಬಿಡಿಸುವ ಸಲುವಾಗಿ ಸಿಂಹದ ಬಾಯಿಗೆ ನನ್ನ ಬಲಗೈಯನ್ನು ಹಾಕಿದ್ದೆ. ನಂತರ ಮಗುವನ್ನು ಬಿಟ್ಟ ಸಿಂಹ ನನ್ನ ಕೈಯನ್ನು ಗಾಯ ಮಾಡಿ ಓಡಿಹೋಯಿತು ಎಂದು ಮಗು ರಕ್ಷಿಸಿದ ತಾಯಿ ಹೇಳಿಕೊಂಡಿದ್ದಾಳೆ.
ದಾಳಿಗೊಳಗಾದ ಮಗು ತೀವ್ರವಾಗಿ ಗಾಯಗೊಂಡಿದ್ದು, ಮುಖ ಹಾಗೂ ಕತ್ತಿನ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ. ಕೂಡಲೇ ಮಗು ಹಾಗೂ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿ ಮಾಹಿತಿ ಸಿಗುತ್ತಿದ್ದಂತೆ ವನ್ಯಜೀವಿ ಅಧಿಕಾರಿಗಳು ಸಿಂಹಗಳಿಗಾಗಿ ಹುಡುಕಾಟ ಆರಂಭಿಸಿದ್ದರು. ಅಲ್ಲದೆ, ಕೆಲವೇ ಗಂಟೆಗಳಲ್ಲಿ 2 ಸಿಂಹಗಳನ್ನು ಹತ್ಯೆ ಮಾಡಿದ್ದಾರೆ. ಎರಡೂ ಸಿಂಹಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು, ದಾಳಿ ಮಾಡಿದ ಪರ್ವತ ಸಿಂಹಕ್ಕೆ 2 ವರ್ಷ ವಯಸ್ಸಾಗಿತ್ತು. ಸಂಪೂರ್ಣವಾಗಿ ಬೆಳವಣಿಗೆಯಾಗಿರಲಿಲ್ಲ. ದಾಳಿ ವೇಳೆ ಸಿಂಹಗಳು ಹಸಿವಿನಿಂದ ಬಳಲುತ್ತಿದ್ದವು. ಸರಿಯಾದ ಸಮಯಕ್ಕೆ ಮಗು ಸಿಕ್ಕಿದೆ. ಹೀಗಾಗಿ ದಾಳಿ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.