ವಿದೇಶ

ಉತ್ತರ ಕೊರಿಯಾಗೆ ಅಣ್ವಸ್ತ್ರ ಮಾರಾಟ ಮುಂದುವರೆಸಿದ ಪಾಕ್: ಅಮೆರಿಕ ಮೂಲಗಳು

Lingaraj Badiger
ವಾಷಿಂಗ್ಟನ್: ವಿಶ್ವಸಂಸ್ಥೆಯ ನಿಷೇಧದ ನಡುವೆಯೂ ಪಾಕಿಸ್ತಾನ ಉತ್ತರ ಕೊರಿಯಾಗೆ ಅಣ್ವಸ್ತ್ರಗಳನ್ನು ಹಾಗೂ ಅಣ್ವಸ್ತ್ರ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಮಾರಾಟ ಮುಂದುವರೆಸಿರುವುದು ಅಮೆರಿಕ ಮೂಲಗಳಿಂದ ಬಹಿರಂಗವಾಗಿದೆ.
ಎನ್ಎಸ್ ಜಿ ಸದಸ್ಯತ್ವ ಪಡೆಯಲು ಯತ್ನಿಸುತ್ತಿರುವ ಪಾಕಿಸ್ತಾನ ನಿಯಮ ಉಲ್ಲಂಘಿಸಿ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ ಮಾಡುತ್ತಿದೆ. ಪಾಕಿಸ್ತಾನ ಶಕ್ತಿ ಆಯೋಗ (ಪಿಎಇಸಿ) ನಿರಂತರವಾಗಿ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ತಯಾರಿ ವಸ್ತುಗಳ ಸರಬರಾಜು ಮಾಡುತ್ತಿದೆ ಎಂದು ಅಣ್ವಸ್ತ್ರಗಳ ಮಾರಾಟದ ಮೇಲೆ ನಿಗಾ ವಹಿಸುವ ವಿಶ್ವಸಂಸ್ಥೆಯ ತಂಡದಲ್ಲಿರುವ ಉನ್ನತ ಮೂಲಗಳು ತಿಳಿಸಿವೆ.
ಚೀನಾದ ಅಣು ಶಕ್ತಿ ಪ್ರಾಧಿಕಾರ (ಸಿಎಇಎ)ದಿಂದ ಪಾಕಿಸ್ತಾನದ ಪಿಎಇಸಿಗೆ ಸರಬರಾಜಾಗುವ ವಸ್ತುಗಳು ಅಕ್ರಮ ಮಾರ್ಗದ ಮೂಲಕ ಉತ್ತರ ಕೊರಿಯಾ ತಲುಪುತ್ತಿದೆ. ಈ ಸಂಬಂಧ ಸಿಎಇಎಗೆ ಇತ್ತೀಚೆಗೆ ದೂರು ಸಹ ದಾಖಲಾಗಿತ್ತು. ಚೀನಾದ ಬೀಜಿಂಗ್ ಸನ್​ಟೆಕ್ ಟೆಕ್ನಾಲಜೀಸ್ ಕಂಪನಿ ಪಾಕಿಸ್ತಾನಕ್ಕೆ ಕಳುಹಿಸಿದ ಅಣ್ವಸ್ತ್ರ ತಯಾರಿ ವಸ್ತುಗಳನ್ನು ಪಾಕಿಸ್ತಾನದ ಅಧಿಕಾರಿಗಳು ಉತ್ತರ ಕೊರಿಯಾಕ್ಕೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಈ ವಿಷಯವನ್ನು ಚೀನಾ ಸರ್ಕಾರ ಗೋಪ್ಯವಾಗಿಟ್ಟಿದ್ದು, ಪಾಕಿಸ್ತಾನಕ್ಕೆ ಎನ್​ಎಸ್​ಜಿ ಸದಸ್ಯತ್ವ ದೊರೆಯಬೇಕು ಎಂದು ಬೆಂಬಲಿಸುತ್ತಿದೆ.
ಪಾಕಿಸ್ತಾನ ಅಕ್ರಮವಾಗಿ ಅಣ್ವಸ್ತ್ರ ತಯಾರಿ ವಸ್ತುಗಳನ್ನು ಉತ್ತರ ಕೊರಿಯಾಕ್ಕೆ ಸರಬರಾಜು ಮಾಡುತ್ತಿರುವ ವಿಷಯವನ್ನು ಎನ್​ಎಸ್​ಜಿ ಸಭೆಯಲ್ಲಿ ಚರ್ಚೆಗೆ ತರಲಾಗುವುದು. 2012 ರಿಂದ 2015ರ ಅವಧಿಯಲ್ಲಿ ಇರಾನ್​ನ ತೆಹ್ರಾನ್​ನಲ್ಲಿರುವ ಉತ್ತರ ಕೊರಿಯಾ ರಾಯಭಾರಿಗಳು 8 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಣ್ವಸ್ತ್ರ ವಹಿವಾಟಿನ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಸರ್ಕಾರದ ಮೂಲಗಳು ತಿಳಿಸಿವೆ.
SCROLL FOR NEXT