ನರೇಂದ್ರ ಮೋದಿ, ಕ್ಷಿ ಜಿನ್ಪಿಂಗ್
ತಾಷ್ಕೆಂಟ್: ಶಾಂಘೈಸಹಕಾರ ಒಕ್ಕೂಟ(ಎಸ್ಸಿಒ)ದ ಶೃಂಗಸಭೆಯಲ್ಲಿ ಭಾಗವಹಿಸಲು ಗುರುವಾರ ಉಜ್ಬೆಕಿಸ್ತಾನಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್ ತಲುಪಿದ್ದು, ಅಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಮೋದಿ ಹಾಗೂ ಜಿನ್ ಪಿಂಗ್ ಮಾತುಕತೆಯ ವಿವರ ಲಭ್ಯವಾಗಿಲ್ಲ. ಆದರೆ ಸಿಯೋಲ್ನಲ್ಲಿ ನಡೆಯುತ್ತಿರುವ ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್ಜಿ) ಸಭೆಗೂ ಮುನ್ನ ಮೋದಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ್ದು ಮಹತ್ವ ಪಡೆದುಕೊಂಡಿದೆ. ಇಂದು ಸಂಜೆ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ನೀಡುವ ವಿಚಾರ ಚರ್ಚೆಗೆ ಬರಲಿದೆ.
48 ರಾಷ್ಟ್ರಗಳು ಸದಸ್ಯತ್ವ ಹೊಂದಿರುವ ಪರಮಾಣು ಇಂಧನ ಪೂರೈಕೆ ಸಮೂಹದ(ಎನ್ಎಸ್ ಜಿ) ಸದಸ್ಯತ್ವಕ್ಕೆ ಭಾರತ ಮತ್ತು ಪಾಕಿಸ್ತಾನ ಅರ್ಜಿ ಸಲ್ಲಿಸಿದ್ದು, ಭಾರತದ ಅರ್ಜಿಯ ಬಗ್ಗೆ ಇಂದು ಚರ್ಚಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಎರಡು ದಿನಗಳ ಕಾಲ ನಡೆಯುವ ಸಭೆಯ ಕಾಲದಲ್ಲಿ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖಂಡರನ್ನು ಮೋದಿ ಭೇಟಿ ಮಾಡಲಿದ್ದಾರೆ. ಉಜ್ಬೆಕ್ ಪ್ರಧಾನಿ ಶವಕತ್ ಮಿರ್ಜಿಯೊಯೆವ್ ಅವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸ್ವಾಗತಿಸಿದರು.
ಶಾಂಘೈ ಸಹಕಾರ ಸಂಘಟನೆ (ಶಾಂಘೈ ಕೋ ಆಪರೇಷನ್ ಆರ್ಗನೈಜೇಷನ್ -ಎಸ್ಸಿಒ) ಶೃಂಗ ಸಭೆ ಭಾರತ ಮತ್ತು ಪಾಕ್ ಸೇರಿದಂತೆ ವಿವಿಧ ರಾಷ್ಟ್ರಗಳ ಸಂಘಟನಾತ್ಮಕ ಸಹಭಾಗಿತ್ವ ಬೆಸೆಯುವುದರೊಂದಿಗೆ ಅರ್ಥಿಕ ವಹಿವಾಟು ವೃದ್ಧಿಗೊಳಿಸುವ ಬಾಂಧವ್ಯಕ್ಕೂ ಮಹತ್ವ ದೊರಕಿಸಿಕೊಡಲಿದೆ.
ಎಸ್ಸಿಒ ಸದಸ್ಯತ್ವ ಪಡೆಯಲು ಮತ್ತು ಇದರಿಂದ ಉತ್ತಮ ಫಲಿತಾಂಶ ದೊರಕುವಂತಾಗಲು ಶೃಂಗ ಸಭೆಯಲ್ಲಿ ಭಾರತ ಸಕ್ರಿಯವಾಗಿ ಭಾಗಿಯಾಗಲಿದೆ. ಮಧ್ಯಏಷ್ಯಾದ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಪಾಲನೆ ಮಾಡಲು ಭಾರತ ಉತ್ಸುಕವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಷಿ ಜಿನ್ಪೆಂಗ್ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ಇದೇ ವೇಳೆ ನಡೆಸಲಿರುವ ಮೋದಿ, ಎನ್ಎಸ್ಜಿ (ನ್ಯೂಕ್ಲಿಯರ್ ಸಪ್ಲೇ ಗ್ರೂಪ್) ಸದಸ್ಯತ್ವ ಪಡೆಯವ ನಿಟ್ಟಿನಲ್ಲಿ ಚರ್ಚೆ ನಡೆಸಲಿರುವುದು ವಿಶೇಷ ಮಹತ್ವ ಪಡೆದಿದೆ.