ವಿದೇಶ

ರಾಜ್ಯಸಭೆಗೆ ಆಯ್ಕೆ ಮತ್ತು ಮತದಾನದ ಹಕ್ಕಿಗಾಗಿ ಎನ್ ಆರ್ ಐ ಗಳ ಬೇಡಿಕೆ

Srinivas Rao BV

ವಾಷಿಂಗ್ ಟನ್: ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು ಹಾಗೂ ರಾಜ್ಯಸಭೆಗೆ ಆಯ್ಕೆಯಾಗುವ ಅವಕಾಶವನ್ನು ನೀಡಬೇಕೆಂದು ಭಾರತೀಯ ಮೂಲದವರ ಜಾಗತಿಕ ಸಂಘಟನೆ(ಜಿಒಪಿಐಒ) ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.

ನ್ಯೂಯಾರ್ಕ್ ನಲ್ಲಿ ಜಿಒಪಿಐಒ ವಾರ್ಷಿಕ ಸಮ್ಮೇಳನ ನಡೆದಿದ್ದು, ಭಾರತದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯುವ ವೇಳೆಗೆ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ 10 ಮಿಲಿಯನ್ ಅನಿವಾಸಿ ಭಾರತೀಯರು ಜೀವಿಸುತ್ತಿದ್ದು, ಇವರಿಗೆ ಭಾರತದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ, ಆದ್ದರಿಂದ ಭಾರತ ಸರ್ಕಾರ ನಿವಾಸಿ ಭಾರತೀಯರಿಗೆ ಮತದಾನದ ಅವಕಾಶ ಕಲ್ಪಿಸಿಕೊಡುವುದರೊಂದಿಗೆ,  ಭಾರತ ಸರ್ಕಾರ ಪ್ರಮುಖ ಅನಿವಾಸಿ ಭಾರತೀಯರನ್ನು ಗುರುತಿಸಿ ಅವರುಗಳನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂದು ಸಮ್ಮೇಳನದಲ್ಲಿ ಒತ್ತಾಯ ಕೇಳಿಬಂದಿದೆ.

ಪ್ರಮುಖ ಅನಿವಾಸಿ ಭಾರತೀಯರನ್ನು ರಾಜ್ಯಸಭೆಗೆ ನಾಮನಿರ್ದೇಶನ( ಆಯ್ಕೆ) ಮಾಡುವುದರಿಂದ ಭಾರತ ಹಾಗೂ ಅನಿವಾಸಿ ಭಾರತೀಯರ ನಡುವೆ ಉತ್ತಮ ಸಂಬಂಧವನ್ನು ಬೆಸೆಯಬಹುದು ಎಂದು ಜಿಒಪಿಐಒ ಸಮ್ಮೇಳನ ಅಭಿಪ್ರಾಯಪಟ್ಟಿದೆ. ನ್ಯೂಯಾರ್ಕ್ ನಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ 20 ದೇಶಗಳಿಂದ ಸುಮಾರು 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಅನಿವಾಸಿ ಭಾರತೀಯ ಸಮುದಾಯ ಮತದಾನ ಹಕ್ಕಿಗಾಗಿ ಬೇಡಿಕೆ ಇಟ್ಟಿರುವುದರೊಂದಿಗೆ, ಭಾರತದಲ್ಲಿ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಸಾಮಾಜಿಕ ಹಾಗೂ ಪರಿಸರ ಕಾಳಜಿಗೆ ಕೈಜೋಡಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕಾಗಿ ಹಲವಾರು ಅಡೆತಡೆಗಳಿರುವುದರ ಬಗ್ಗೆಯೂ ಅನಿವಾಸಿ ಭಾರತೀಯ ಸಮುದಾಯ ಸಮ್ಮೇಳನದಲ್ಲಿ ಚರ್ಚೆ ನಡೆಸಿದೆ.

ಇನ್ನು ಹಲವು ವರ್ಷಗಳು ಭಾರತದಿಂದ ದೂರವಿದ್ದ ಅನಿವಾಸಿ ಭಾರತೀಯರು ಮತ್ತೆ ತಮ್ಮ ಕುಟುಂಬದೊಂದಿಗೆ ಜೀವಿಸಲು ಭಾರತಕ್ಕೆ ವಾಪಸ್ಸಾದಾಗ ಸವಲತ್ತುಗಳಿಗಾಗಿ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದಕ್ಕೆ ತೆರಿಗೆ ವಿನಾಯ್ತಿ ಇದ್ದು, ಭಾರತದಲ್ಲೂ ಇದೆ ಮಾದರಿಯ ಕಾನೂನು ಜಾರಿಯಾಗಬೇಕು. ಕೆಲ ಕಾಲ ವಿದೇಶದಲ್ಲಿದ್ದು ಭಾರತಕ್ಕೆ ಮರಳಿದ ಭಾರತೀಯರಿಗೆ, ಭಾರತದಲ್ಲಿ ನಿವೃತ್ತಿಯಾದವರಿಗೆ ಸಿಗುವ ತೆರಿಗೆ ವಿನಾಯ್ತಿಯನ್ನೇ ನೀಡಬೇಕು ಎಂದು ಜಿಒಪಿಐಒ ಪ್ರತಿನಿಧಿಗಳು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.

SCROLL FOR NEXT