ಲಂಡನ್: ಜಗತ್ತಿನಾದ್ಯಂತ ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ತನ್ನ ಕರಾಳ ಮುಖವನ್ನು ಚಾಚಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಇದೀಗ ಸಂಘಟನೆ ಸೇರಲು ಸಿದ್ಧರಿರುವ ಜಿಹಾದಿಗಳಿಗೆ 23 ಪ್ರಶ್ನೆಗಳನ್ನು ಮುಂದಿಡಲಿದೆಯಂತೆ.
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ 23 ಪ್ರಶ್ನೆಗಳಲ್ಲಿ ಹೊಸ ಜಿಹಾದಿಯ ಜನ್ಮ ದಿನಾಂಕ, ರಾಷ್ಟ್ರೀಯತೆ, ಬ್ಲಡ್‌ಗ್ರೂಪ್ ಹಾಗೂ ಹಿಂದಿನ ಜಿಹಾದಿ ಅನುಭವಗಳು ಸೇರಿದ್ದು, ಈ ಎಲ್ಲ ವಿಷಯಗಳಲ್ಲೂ ಲಿಖಿತ ದಾಖಲೆಗಳನ್ನು ಸಲ್ಲಿಸಬೇಕು. ಅನುಭವಿಗಳಿಗೆ ಮೊದಲ ಆದ್ಯತೆ. ಐಎಸ್ ಸಿದ್ಧಪಡಿಸಿರುವ ಈ ಪ್ರಶ್ನೆ ಪತ್ರಿಕೆಯಲ್ಲಿ ಸೋರಿಕೆಯಾದ ಅಂಶಗಳಲ್ಲಿ ಇವೆಲ್ಲ ಸೇರಿದ್ದು, ಬ್ರಿಟನ್, ಅಮೆರಿಕ ಸೇರಿದಂತೆ 51 ರಾಷ್ಟ್ರಗಳ 22 ಸಾವಿರ ಮಂದಿ ಹೆಸರು ನೋಂದಾಯಿಸಿರುವುದೂ ತಿಳಿದುಬಂದಿದೆ.
ಜಮಾನ್-ಅಲ್-ವಾಸಲ್ ಎಂಬ ಸಿರಿಯ ವಿರೋಧಿ ಅಂತರ್ಜಾಲ ತಾಣದಲ್ಲಿ ಈ ಅರ್ಜಿ ವಿವರಣೆಗಳು ಲಭ್ಯವಿದ್ದು, ಹೊಸ ಜಿಹಾದಿ ಯಾವ ಉಗ್ರ ಸಂಘಟನೆ ಸೇರುತ್ತೇನೆ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ತಿಳಿಸಲಾಗಿದೆ. ಸಾವಿರಾರು ಸೇರ್ಪಡೆ ಅರ್ಜಿ ಫಾರಂಗಳು ಈಗಾಗಲೇ ವಿತರಣೆಯಾಗಿರುವ ಬಗ್ಗೆಯೂ ಸಂಪೂರ್ಣ ಮಾಹಿತಿಗಳು ಲಭ್ಯವಾಗಿವೆ.
ಈ ಎಲ್ಲ ದಾಖಲೆಗಳು ಅರೇಬಿಕ್ ಭಾಷೆಯಲ್ಲಿವೆ ಮತ್ತು ಇದಕ್ಕೆ ಸ್ವಯಂಘೋಷಿತ ಇಸ್ಲಾಮಿಕ್ ಸ್ಟೇಟ್ ಲಾಂಛನವನ್ನು ಬಳಸಲಾಗಿದೆ. ಜಿಹಾದಿ ಮತ್ತು ಅವನ ತಾಯಿಯ ಹೆಸರು, ವಿದ್ಯಾರ್ಹತೆ ಹಾಗೂ ಶಿರಿಯಾ(ಮುಸ್ಲಿಂ ಕಾಯ್ದೆ) ಬಗ್ಗೆ ಹೊಂದಿರುವ ಜ್ಞಾನಗಳು ಪ್ರಮುಖವಾಗಿರಬೇಕು. ಈ ಎಲ್ಲ ಇಸಿಸ್ ನಿಬಂಧನೆಗಳು ಸೋರಿಕೆಯಾಗಿದೆ.