ಮಯನ್ಮಾರ್: ಮಯನ್ಮಾರ್ ಸಂಸತ್ ನಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆದಿದ್ದು, ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ನಾಯಕಿ ಆಂಗ್ ಸಾನ್ ಸೂಕಿ ಅವರ ಆಪ್ತರಾದ ಯು ಟಿನ್ ಕ್ಯಾವ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
50 ವರ್ಷಗಳ ಸೇನೆಯ ಆಡಳಿತದ ನಂತರ ಮಯನ್ಮಾರ್ ನ್ನು ಮುನ್ನಡೆಸುವ ಪ್ರಥಮ ಅಧ್ಯಕ್ಷರಾಗಿ ಯು ಹ್ತೀನ್ ಕ್ಯು ಆಯ್ಕೆಯಾಗಿದ್ದಾರೆ. 69 ವರ್ಷದ ಯು ಟಿನ್ ಕ್ಯಾವ್ ಅವರ ಪರ 360 ಮತಗಳು ಚಲಾವಣೆಯಾಗಿದ್ದರೆ, ಯುಎಸ್ ಡಿಪಿ ಪಕ್ಷದ ಸೇನೆ ಬೆಂಬಲಿತ ಅಭ್ಯರ್ಥಿ ಯು ಮ್ಯಿಂತ್ ಸ್ವೆ 213 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಮಯನ್ಮಾರ್ ಟೈಮ್ಸ್ ವರದಿ ಮಾಡಿದೆ.
ಮಯನ್ಮಾರ್ ಸಂಸತ್ ನ ಮಿಲಿಟರಿ ಬ್ಲಾಕ್ ನಲ್ಲಿ ಒಟ್ಟು 166 ಸ್ಥಾನಗಳಿದ್ದು ಸೇನೆ ಬೆಂಬಲಿತ ಯುಎಸ್ ಡಿಪಿ 41 ಸ್ಥಾನಗಳನ್ನು ಹೊಂದಿದೆ. ಸೇನೆ ಬೆಂಬಲಿತ ಯುಎಸ್ ಡಿಪಿ ವಿರುದ್ಧ ಎನ್ ಎಲ್ ಡಿ ಪಕ್ಷವನ್ನು ಮುನ್ನಡೆಸಿ ಬಹುಮತ ಪಡೆದಿದ್ದ ಆಂಗ್ ಸಾನ್ ಸೂಕಿ ಪುತ್ರರು ವಿದೇಶಿ ಪ್ರಜೆಗಳಾಗಿರುವುದರಿಂದ ಸೂಕಿ ಅವರು ಅಧ್ಯಕ್ಷರಾಗುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದ ಸೂಕಿ ಅವರ ಆಪ್ತರಾದ ಯು ಟಿನ್ ಕ್ಯಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.