ರಿಯಾದ್: ಇಸ್ಲಾಮಿಕ್ ರಾಷ್ಟ್ರಗಳ ಸೇನಾ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲು ಸೌದಿ ಅರೇಬಿಯಾ ಯೋಜನೆ ರೂಪಿಸಿದೆ. ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ರೀತಿಯಲ್ಲಿ ಸೇನಾ ಒಕ್ಕೂಟಕ್ಕೆ ಪಾಕಿಸ್ತಾನ ನೇತೃತ್ವ ವಹಿಸಲಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡುವುದು ಒಕ್ಕೂಟದ ಮುಖ್ಯ ಉದ್ದೇಶವಾಗಲಿದೆಯಂತೆ.
ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ನಿರ್ನಾಮ ಮಾಡುವ ಉದ್ದೇಶದಿಂದ ಸೇನಾ ಒಕ್ಕೂಟ ಜಾರಿಗೆ ತರುವ ಪ್ರಸ್ತಾವನೆ ಬಂದಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ. ಸೌದಿ ಅರೇಬಿಯವು ಬೃಹತ್ ಸೇನಾ ಕವಾಯತನ್ನು ಆಯೋಜಿಸಿರುವ ಬೆನ್ನಲ್ಲೇ ಈ ಯೋಜನೆಯ ಬಗ್ಗೆ ಪ್ರಸ್ತಾವನೆ ಬಂದಿದೆ.
ಅಚ್ಚರಿಯೆಂದರೆ ಭಯೋತ್ಪಾದನೆ ವಿರುದ್ಧ ಹೋರಾಡಲು ಸೇನಾ ಒಕ್ಕೂಟ ಎಂದು ಸೌದಿ ಅರೇಬಿಯಾ ಹೇಳುತ್ತಿದೆಯಾದರೂ, ಶಿಯಾ ಬಹುಸಂಖ್ಯಾತರಿರುವ ಇರಾನ್ ನ್ನು ಈ ಒಕ್ಕೂಟದಿಂದ ಹೊರಗಿಡುವ ಸಾಧ್ಯತೆ ಇದೆ. ಅಮೆರಿಕ- ಸೌದಿ ಅರೇಬಿಯಾ ಸಂಬಂಧ ಹದಗೆಡುತ್ತಿರುವ ಬೆನ್ನಲ್ಲೇ ಸೌದಿ ನ್ಯಾಟೋ ಮಾದರಿಯಲ್ಲಿ ಸೇನಾ ಒಕ್ಕೂಟದ ಪ್ರಸ್ತಾವನೆ ಮುಂದಿಟ್ಟಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಸೋವಿಯತ್ ಒಕ್ಕೂಟವನ್ನು ಎದುರಿಸಲು 1949ರಲ್ಲಿ ನ್ಯಾಟೋ ರಚನೆಯಾಗಿತ್ತು.