ಪ್ಯಾರಿಸ್: ಪ್ಯಾರಿಸ್ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕ, ಬ್ರಸ್ಸಲ್ಸ್ ಪ್ರದೇಶದಲ್ಲಿ ಪೊಲೀಸರ ಕಣ್ತಪ್ಪಿಸಿ ನಾಲ್ಕು ತಿಂಗಳ ಕಾಲ ತಲೆಮರೆಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಶುಕ್ರವಾರ ಸಂಜೆ ತಲೆದೋರಿದೆ.
ಪ್ರ್ಯಾರಿಸ್ ಭಯೋತ್ಪಾದಕ ದಾಳಿ ನಡೆಸಿದ್ದ ೧೦ ಜನ ಭಯೋತ್ಪಾದಕರಲ್ಲಿ ಬದುಕುಳಿದಿದ್ದ ಎನ್ನಲಾದ ಶಂಕಿತ ಅಬ್ಡೆಸ್ಲಾಮ್ ನನ್ನು ಬಂಧಿಸಿರುವುದಾಗಿ ಬೆಲ್ಜಿಯಂ ಘೋಷಿಸಿದೆ. ಬೆಲ್ಜಿಯಂ ನ ವಲಸೆ ಸಚಿವ ಥಿಒ ಫ್ರಾಂಕನ್ "ನಾವು ಅವನನ್ನು ಹಿಡಿದಿದ್ದೇವೆ" ಎಂದು ಘೋಷಿಸಿದ್ದಾರೆ.
ಅಬ್ದೆಸ್ಲಾಮ್ ಜೊತೆಗೆ ಅದೇ ಕುಟುಂಬದ ಇನ್ನೂ ಮೂವರನ್ನು ಮತ್ತು ಅಮಿನಿ ಚೌಕ್ರಿ ಎಂಬುವನನ್ನು ಬಂಧಿಸಲಾಗಿದೆ. ಇವನು ಈ ಹಿಂದೆ ಜರ್ಮನಿಯಲ್ಲಿ ತಪ್ಪು ಗುರುತಿನ ಚೀಟಿ ಹೊಂದಿದ್ದಲ್ಲದೆ ಅಬ್ಡೆಸ್ಲಾಮ್ ಜೊತೆಗೆ ಕಾಣಿಸಿಕೊಂಡಿದ್ದ ಎನ್ನಲಾಗಿದೆ.
"ಪ್ರಜಾಪ್ರಭುತ್ವದ ಹೋರಾಟದಲ್ಲಿ ಈ ಬಂಧನ ಅತಿ ಮುಖ್ಯ" ಎಂದು ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಈ ಬಂಧನವನ್ನು ಬಣ್ಣಿಸಿದ್ದಾರೆ.
"ಆದಷ್ಟು ಬೇಗ ಅಬ್ಡೆಸ್ಲಾಮ್ ನನ್ನು ಫ್ರಾನ್ಸ್ ಗೆ ಗಡಿಪಾರು ಮಾಡಬೇಕು" ಎಂದು ಫ್ರಾನ್ಸ್ ಅಧ್ಯಕ್ಷ ಹಾಲ್ಲೆಂಡ್ ಕೋರಿದ್ದಾರೆ.
ಬೆಲ್ಜಿಯಮ್ ನ ಈ ಕ್ರಮಕ್ಕಾಗಿ ಹಾಲ್ಲೆಂಡ್ ಮತ್ತು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬೆಲ್ಜಿಯಂ ಪ್ರಧಾನಿಗೆ ಫೋನ್ ಮೂಲಕ ಧನ್ಯವಾದ ಹೇಳಿದ್ದಾರೆ ಎನ್ನಲಾಗಿದೆ.
ದಾಳಿಯ ವೇಳೆಯಲ್ಲಿ ಗಾಯಗೊಂಡಿರುವ ಅಬ್ಡೆಸ್ಲಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆಯಲ್ಲಿ ತನ್ನ ಗುರುತನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.